ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು ಲಕ್ಷ ರೂ. ಮೌಲ್ಯದ 5ಕೆಜಿ 850 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಎನ್ ಡಿಪಿಎಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎನ್.ಆರ್.ಪುರ ತಾಲೂಕು ಕಟ್ಟಿನಮನೆ ಗ್ರಾಮದ ವಿಜಯಕುಮಾರ್ ಅಲಿಯಾಸ್ ವಿಜಯ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಚಿಕ್ಕಮಗಳೂರು ರೈಲ್ವೇ ನಿಲ್ದಾಣದ ಬಳಿ ಅಡಗಿಸಿಟ್ಟಿದ್ದ ಮೂರು ಲಕ್ಷ ರೂ. ಮೌಲ್ಯದ ಗಾಂಜಾವನ್ನು ಪೊಲೀಸರಿಗೆ ತೋರಿಸಿದ್ದಾನೆ.
ಕೆಲ ದಿನಗಳ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದ ಪೊಲೀಸರು ಅವರಿಂದ ಒಂದು ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದರು. ಈ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತಮಗೆ ವಿಜಯ ಶೆಟ್ಟಿ ಗಾಂಜಾ ಸರಬರಾಜು ಮಾಡುತ್ತಿರುವ ಬಗ್ಗೆ ಬಾಯಿ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರು ವಿಜಯ ಶೆಟ್ಟಿ ಬಂಧನಕ್ಕೆ ಬಲೆ ಬೀಸಿದ್ದರು.
ಕೊನೆಗೂ ವಿಜಯ ಶೆಟ್ಟಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತಾನು ಈ ಹಿಂದೆ ಬಂಧಿತರಾದವರಿಗೆ ಗಾಂಜಾ ನೀಡಲು ಬಂದಿದ್ದು, ಅವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರಿಂದ ತಾನು ರೈಲ್ವೇ ನಿಲ್ದಾಣದ ಬಳಿ ಗಾಂಜಾ ಅಡಗಿಸಿಟ್ಟಿರುವುದಾಗಿ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ವಿಜಯಶೆಟ್ಟಿಯನ್ನು ರೈಲ್ವೇ ನಿಲ್ದಾಣದ ಸಮೀಪ ಕರೆದೊಯ್ದು ಅಡಗಿಸಿಟ್ಟಿದ್ದ ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ನಗರದ ಠಾಣೆ ಇನ್ಸ್ ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್, ಪಿಎಸ್ ಐಗಳಾದ ಶಂಭುಲಿಂಗನಗೌಡ, ಧನರಾಜ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು
Three lakh rupees worth of ganja seized
Leave a comment