ಅಜ್ಜಂಪುರ: ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡವೊಂದು ಎರಡು ಕುಟುಂಬಗಳನ್ನು ಬೀದಿಗೆ ತಂದಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟದೊಂದಿಗೆ ಮೂರು ಮೂಕಪ್ರಾಣಿಗಳು ಜೀವಂತ ದಹನವಾಗಿರುವ ಘಟನೆ ಅಜ್ಜಂಪುರ ಸಮೀಪದ ಬೇಗೂರು ಗ್ರಾಮದಲ್ಲಿ ವರದಿಯಾಗಿದೆ.
ಗ್ರಾಮದ ನಿವಾಸಿಗಳಾದ ಲೋಕೇಶಪ್ಪ ಹಾಗೂ ಮಹಾಂತೇಶ್ ಎಂಬುವವರಿಗೆ ಸೇರಿದ ಶೆಡ್‌ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಮನೆಗಳನ್ನು ಆವರಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಕಣ್ಣೆದುರೇ ಮನೆಯಲ್ಲಿದ್ದ ಹಸುವಿನ ಒಂದು ಕರು ಹಾಗೂ ಎರಡು ಎಮ್ಮೆ ಕರುಗಳು ಬೆಂಕಿಗೆ ಆಹುತಿಯಾಗಿರುವುದು ಅಲ್ಲಿದ್ದವರ ಕರುಳು ಹಿಂಡುವಂತಿತ್ತು.
ಬೆಂಕಿಯ ಅಬ್ಬರ ಎಷ್ಟಿತ್ತೆಂದರೆ ಮನೆಯಲ್ಲಿದ್ದ ಒಂದು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ವರ್ಷವಿಡೀ ಕಷ್ಟಪಟ್ಟು ಬೆಳೆದು ಸಂಗ್ರಹಿಸಿಟ್ಟಿದ್ದ ಸುಮಾರು 30 ಚೀಲ ರಾಗಿ ಸೇರಿದಂತೆ ಎಲ್ಲಾ ದವಸ ಧಾನ್ಯಗಳು ಬೂದಿಯಾಗಿವೆ. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಬೆಲೆಬಾಳುವ ಆಭರಣಗಳು ಹಾಗೂ ಪ್ರಮುಖ ದಾಖಲೆಗಳು ಬೆಂಕಿಗಾಹುತಿಯಾಗಿದ್ದು, ಎರಡು ಕುಟುಂಬಗಳು ಕಂಗಾಲಾಗಿವೆ. ಸ್ಥಳೀಯರು ಕೂಡಲೇ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲವೂ ಸರ್ವನಾಶವಾಗಿತ್ತು.
ಈ ಘಟನೆಯಿಂದ ಅಜ್ಜಂಪುರ ಭಾಗದ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತವಾಗಿದೆ. ಅಜ್ಜಂಪುರ ವ್ಯಾಪ್ತಿಯಲ್ಲಿ ಒಂದು ಅಗ್ನಿಶಾಮಕ ಠಾಣೆ ಇದ್ದಿದ್ದರೆ ಇಷ್ಟೊಂದು ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಪ್ರತಿ ಬಾರಿ ಇಂತಹ ಅವಘಡಗಳು ಸಂಭವಿಸಿದಾಗಲೂ ತರೀಕೆರೆಯಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿರುತ್ತೆ. ಹೀಗಾಗಿ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಜ್ಜಂಪುರಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಗಟ್ಟಿಯಾಗಿ ಒತ್ತಾಯಿಸಿದ್ದಾರೆ.
Three animals burnt alive in accidental fire
Leave a comment