ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಕಳೆದ 45 ವರ್ಷಗಳಿಂದ ರೈತರ ಪರವಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ, ರೈತರು ಸ್ವಾಭಿಮಾನಿಗಳಾಗುವಂತೆ, ಅನ್ಯಾಯದ ವಿರುದ್ಧ ಎದ್ದು ನಿಲ್ಲುವಂತೆ ಮಾಡಿದೆ ಎಂದು ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.
ತಾಲೂಕಿನ ಚಿಕ್ಕಗೌಜದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಸಂಘ ನಿರಂತರ ಮತ್ತು ರಾಜಿರಹಿತ ಹೋರಾಟದ ಮೂಲಕ ರೈತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಶೋಷಣೆಯನ್ನು ತಡೆಗಟ್ಟುವಲ್ಲಿ, ಆ ಸಮುದಾಯಕ್ಕೆ ನ್ಯಾಯ ಮತ್ತು ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ, ರೈತಪರ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಶ್ರಮವಹಿಸಿದೆ ಎಂದು ತಿಳಿಸಿದರು.
ಭಾರತ ಸರ್ಕಾರ ಐರೋಪ್ಯ ದೇಶಗಳೊಂದಿಗೆ ಹಾಲನ್ನು ಆಮದು ಮಾಡಿಕೊಳ್ಳುವ ಕುರಿತು ಒಪ್ಪಂದ ಮಾಡಿಕೊಂಡಿದ್ದು, ವಿದೇಶಿ ಹಾಲು ದೇಶಕ್ಕೆ ಬಂದರೆ ಸ್ಥಳೀಯ ರೈತರ ಹಾಲು ಕೇಳುವವರಿಲ್ಲದಂತಾಗಿ ರೈತರು ನಷ್ಟ ಅನುಭವಿಸಿ ಬೀದಿಗೆ ಬೀಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆಯ ಅಗತ್ಯವಿದೆ ಎಂದರು.
ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ್ ಮಾತನಾಡಿ ರೈತ ವರ್ಗ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಬೇಕು, ಹಳ್ಳಿ ಹಳ್ಳಿಗಳಲ್ಲೂ ರೈತ ಸಂಘದ ಶಾಖೆಗಳನ್ನು ತೆರೆಯಬೇಕು ಎಂದು ಸಲಹೆ ಮಾಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ರೈತ ಸಂಘದ ಹೋರಾಟಗಳಿಗೆ ರೈತ ಸಮುದಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ 20 ಕ್ಕೂ ಹೆಚ್ಚು ಗ್ರಾಮಸ್ಥರು ರೈತ ಸಂಘಕ್ಕೆ ಸೇರ್ಪಡೆಗೊಂಡರು, ಹಸಿರು ಶಾಲು ಹೊಂದಿಸಿ ಅವರನ್ನು ಸ್ವಾಗತಿಸಲಾಯಿತು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಉಮೇಶ್, ಲಕ್ಯಾ ಹೋಬಳಿ ಅಧ್ಯಕ್ಷ ದೇವರಾಜೇಗೌಡ, ಯುವ ಘಟಕದ ಅಧ್ಯಕ್ಷ ಯುವರಾಜ್, ಜಿಲ್ಲಾ ಉಪಾಧ್ಯಕ್ಷ ರಾದ ಕುಮಾರಸ್ವಾಮಿ, ಚಂದ್ರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಮಾಸ್ತೇಗೌಡ, ರೈತ ಸಂಘದ ಲಕ್ಯಾ ಹೋಬಳಿ ಸಂಚಾಲಕ ರವಿ ಬಿಳೇಕಲ್ಲಹಳ್ಳಿ ಸೇರಿದಂತೆ ಚಿಕ್ಕಗೌಜ ಗ್ರಾಮದ ಮುಖಂಡರಾದ ನಿಂಗೇಗೌಡ, ನಾಗೇಗೌಡ, ಸಣ್ಣೇಗೌಡ, ತಿಮ್ಮೇಗೌಡ, ಲೋಕೇಶ್ ಉಪಸ್ಥಿತರಿದ್ದರು.
The farmers’ union has made farmers self-respectful and stand up against injustice.
Leave a comment