ಚಿಕ್ಕಮಗಳೂರು: ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಬೇಡಿಕೆಗೆ ಎದುರಾಗಿ ಜಿಲ್ಲೆಯ ಎಲ್ಲ್ಲ ೯ ತಾಲ್ಲೂಕುಗಳು ಶೇ.೧೦೦ ರಷ್ಟು ಕಂದಾಯ ವಸೂಲಾತಿ ಮಾಡಿದ್ದು ಶೇ.೧೦೪.೯೮ ರಷ್ಟು ಕಂದಾಯ ವಸೂಲಾತಿ ಸಾಧನೆ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದೆ.
ಕಂದಾಯ ಅದಾಲತ್ ಆಂದೋಲನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯ ಎಲ್ಲ್ಲ ತಾಲ್ಲೂಕುಗಳು ಶೇ.೧೦೦ ರಷ್ಟು ತೆರಿಗೆ ವಸೂಲಾತಿ ಮಾಡಿದ್ದವು. ೨೦೨೫-೨೬ನೇ ಸಾಲಿನಲ್ಲಿ ರೂ.೩೦ ಕೋಟಿ ಅಥವಾ ಅದಕ್ಕಿಂತ ಹೆಚ್ಚಿಗೆ ಕಂದಾಯ ಬೇಡಿಕೆ ಇರುವ ಜಿಲ್ಲೆಗಳ ಪೈಕಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆಯಲಾಗಿದೆ.
ಚಿಕ್ಕಮಗಳೂರು ತಾಲ್ಲೂಕು ೨೦೨೫-೨೬ನೇ ಸಾಲಿನ ಬೇಡಿಕೆ ಮೊತ್ತ ರೂ.೮.೦೬ ಕೋಟಿಗೆ ಎದುರಾಗಿ ರೂ.೮.೧೧ ಕೋಟಿ ತೆರಿಗೆ ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಮೊತ್ತ ಕಂದಾಯ ವಸೂಲಾತಿ ಮಾಡಿದ ತಾಲ್ಲೂಕು ಆಗಿ ಪ್ರಥಮ ಸ್ನಾನ ಪಡೆದರೆ, ಶೇ೧೧೨.೧೬ ರಷ್ಟು ಕಂದಾಯ ವಸೂಲಾತಿ ಮಾಡುವ ಮೂಲಕ ಕಳಸ ತಾಲ್ಲೂಕು ಶೇಕಡವಾರು ಕಂದಾಯ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಎನ್.ಆರ್.ಪುರ ತಾಲ್ಲೂಕಿನ ಬಿ.ಕಣಬೂರು ಗ್ರಾಮ ಪಂಚಾಯಿತಿಯು ೨೦೨೫-೨೬ನೇ ಸಾಲಿನ ಬೇಡಿಕೆ ಮೊತ್ತ ರೂ. ೮೭.೨೦ ಲಕ್ಷಕ್ಕೆ ಎದುರಾಗಿ ರೂ. ೮೬.೧೮ ಲಕ್ಷ ವಸೂಲಾತಿ ಮಾಡುವ ಮೂಲಕ ಹೆಚ್ಚು ಕಂದಾಯ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಯಾಗಿ ಪ್ರಥಮ ಸ್ಥಾನ ಪಡೆದರೆ, ಶೇ.೧೬೫.೧೦ ರಷ್ಟು ಕಂದಾಯ ವಸೂಲಾತಿ ಮಾಡುವ ಮೂಲಕ ಅಜ್ಜಂಪುರ ತಾಲ್ಲೂಕಿನ ಶಿವನಿ ಗ್ರಾಮ ಪಂಚಾಯಿತಿಯು ಜಿಲ್ಲೆಯಲ್ಲೇ ಅತೀ ಹೆಚ್ಚು ಶೇಕಡವಾರು ಕಂದಾಯ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಯಾಗಿ ಪ್ರಥಮ ಸ್ಥಾನ ಪಡೆದಿದೆ.
ಜಿಲ್ಲೆಯ ೨೨೬ ಗ್ರಾಮ ಪಂಚಾಯಿತಿಗಳ ಪೈಕಿ, ೨೦೨೫-೨೬ನೇ ಸಾಲಿನ ಬೇಡಿಕೆಗೆ ಎದುರಾಗಿ ಒಟ್ಟು ೧೯೫ ಗ್ರಾಮ ಪಂಚಾಯಿತಿಗಳು ಶೇ.೧೦೦ ರಷ್ಟು ಹಾಗೂ ೨೪ ಗ್ರಾಮ ಪಂಚಾಯಿತಿಗಳು ಶೇ.೯೦ ಕ್ಕಿಂತ ಹೆಚ್ಚು ಕಂದಾಯ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಗಳಾಗಿವೆ.
ಕರ್ನಾಟಕ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮದಡಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯತಿಗಳಿಗೆ ಇಲ್ಲದ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಿದ್ದು ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯ ಕಟ್ಟಡ ಮತ್ತು ನಿವೇಶನಗಳು ಹಾಗೂ ಇನ್ನಿತರ ನಿಯಮಿಸಬಹುದಾದ ರಚನೆಗಳಿಗೆ ತೆರಿಗೆಯನ್ನು ವೈಜ್ಞಾನಿಕವಾಗಿ ವಿಧಿಸಿ, ತೆರಿಗೆ ವಸೂಲಾತಿ ಮಾಡಿ, ತೆರಿಗೆ ಬಳಕೆ ಮಾಡಿಕೊಳ್ಳುವಂತಹ ಅಧಿಕಾರವನ್ನು ಹೊಂದಿವೆ.
ಈ ರೀತಿ ಸ್ವಂತ ಸಂಪನ್ಮೂಲದ ಆದಾಯ, ಅನುದಾನದಿಂದ ಗ್ರಾಮ ಪಂಚಾಯಿತಿಗಳು, ಪಂಚಾಯಿತಿ ಸಿಬ್ಬಂದಿಗಳ ವೇತನ, ಕುಡಿಯುವ ನೀರು ಮತ್ತು ನೈರ್ಮಲ್ಯ ಬೀದಿ ದೀಪಗಳ ನಿರ್ವಹಣೆ ಹಾಗೂ ಕಚೇರಿ ನಿರ್ವಹಣೆಗೆ ಬಳಕೆ ಮಾಡಿಕೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ಈ ಜಿಲ್ಲೆಯಲ್ಲಿ ಕಳೆದ ೨೦೨೪-೨೬ ಮತ್ತು ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಕಂದಾಯ ವಸೂಲಾತಿಯ ವೇಗವನ್ನು ಹೆಚ್ಚಿಸಿ, ಗ್ರಾಮ ಪಂಚಾಯತಿಯ ಸ್ವಂತ ಆದಾಯ, ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಎರಡು ಬಾರಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಮೇಲುಸ್ತುವಾರಿಗೆ ಅನುವಾಗುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನಾಗಿ ಜಿಲ್ಲಾ ಪಂಚಾಯಿತಿಯಿಂದ ನಿಯೋಜಿಸಲಾಗಿತ್ತು.
ಈ ಆಂದೋಲನದ ಭಾಗವಾಗಿ ಪ್ರಥಮವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೈಗಾರಿಕೆಗೆ ಮತ್ತು ವಾಣಿಜ್ಯ ತೆರಿಗೆ ವ್ಯಾಪ್ತಿಗೆ ಬರುವ ಮಧ್ಯಮ, ಸಣ್ಣ ಕೈಗಾರಿಕೆ, ಹೋಟೆಲ್, ಅಂಗಡಿ, ಹೋಂ ಸ್ಟೇ. ರೆಸಾರ್ಟ್ ಹಾಗೂ ಮೊಬೈಲ್ ಟವರ್ಗಳನ್ನು ಗುರುತಿಸಿ ತ್ವರಿತವಾಗಿ ಕಂದಾಯ, ತೆರಿಗೆ ಪಾವತಿ ಮಾಡುವಂತೆ ಗ್ರಾಮ ಪಂಚಾಯತಿಯಿಂದ ಸೂಚನೆ ನೀಡಲಾಯಿತು. ಹೆಚ್ಚಿನ ಮನೆ, ನಿವೇಶನ ಕಂದಾಯ ಬಾಕಿದಾರರಿಗೆ ಕಂದಾಯ ಬಾಕಿ ಪಾವತಿ ಮಾಡುವುದರ ಕುರಿತು ತಗಾದೆ ನೋಟೀಸ್ ಜಾರಿ ಮಾಡಲಾಗಿತ್ತು.
The district ranks 3rd in the state in revenue collection performance.
Leave a comment