ಚಿಕ್ಕಮಗಳೂರು : ಶ್ರೀಗುರುದತ್ತಾತ್ರೇಯ ಪೀಠದಲ್ಲಿ ಶಾಖಾದ್ರಿ ವಂಶಸ್ಥರು ಹಾಗೂ ಮುಸ್ಲಿಂ ಸಮುದಾಯದವರು ಫಾತೇಹ ಕಾರ್ಯಕ್ರಮವನ್ನು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಡೆಸಲು ಮುಂದಾಗಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಆಗ್ರಹಿಸಿದರು.
ಪ್ರೆಸ್ ಕ್ಲಬ್ ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಿ.29ರಂದು ಕೆಲ ಮುಸ್ಲಿಂ ಸಮುದಾಯದವರು ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ರೋಟಿ ಬಾಜಿ ತಯಾರಿಸಿ ಮೆರವಣಿಗೆ ಮೂಲಕ ಆಗಮಿಸಿ ಫಾತೇಹ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು ತಡೆದು ಪಾದಾರ್ಥಗಳನ್ನು ತಗೆದುಕೊಂಡು ಗುಹೆಯೊಳಗೆ ಫಾತೇಹ ಮಾಡಲು ಬಿಡುವುದಿಲ್ಲ ಎಂದಾಗ ಜಿಲ್ಲಾಧಿಕಾರಿ ಮುಜರಾಯಿ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿ ವಿರುದ್ಧ ಘೋಷಣೆಗಳನ್ನು ಹಾಕಿ ಧಿಕ್ಕಾರವನ್ನು ಕೂಗಿದ್ದು ತಪ್ಪು ಎಂದರು.
ಗುಹೆಯಲ್ಲಿ ಹೊಸ ಆಚರಣೆಗಳಿಗೆ ಶಾಖಾದ್ರಿ ವಂಶಸ್ಥರು ಮತ್ತು ಮುಸ್ಲಿಂ ಸಮುದಾಯದವರು ಮುಂದಾಗಿದ್ದಾರೆ. ಫಾತೇಹ ಮಾಡು ವುದು ಸಮಾಧಿಗಳಿಗೆ ಮಾತ್ರ. ದತ್ತಪೀಠದ ಗುಹೆಯೊಳಗೆ ಪೀಠವಿದ್ದು, ದತ್ತಾತ್ರೇಯಸ್ವಾಮಿ ಪಾದುಕೆ ಹಾಗೂ ಮಹಾಸತಿ ಅನುಸೂಯ ದೇವಿಯವರ ಪೀಠವಿದೆ. ಆದರೆ, ಮುಸ್ಲಿಂ ಸಮುದಾಯದವರು ದಾದಾ ಹಯಾತ್ ಮೀರ್ ಖಲಂದರ್ ಮತ್ತು ಮಾಮಾಜುಗ್ನಿ ಅವರ ಸಮಾಧಿಗಳು ಇವೆ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದರು.
ಮುಜರಾಯಿ ಇಲಾಖೆ ಅಧಿಕಾರಿಗಳನ್ನು ಏರುಧ್ವನಿಯಲ್ಲಿ ಪ್ರಶ್ನಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ ಎಂದ ರಂಗನಾಥ ಪದೇ ಪದೇ ಗೊಂದಲ ಹಾಗೂ ಅಶಾಂತಿ ಸೃಷ್ಟಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು, ಗ್ಯಾರವಿ ಹಬ್ಬ ಆಚರಣೆ ಸಂಬಂಧ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶವಿಲ್ಲದೆ ಯಾವುದೇ ಹೊಸ ಆಚರಣೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಧಿಕಾರಿಗಳ ಮೇಲೆ ಕೂಡಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
Leave a comment