ಚಿಕ್ಕಮಗಳೂರು: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜೊತೆಗೆ ಬಾಕಿ ಇರುವ ೩೭ ಸಾವಿರ ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಾ. ೫ರಂದು ಬೆಂಗಳೂರಿನಲ್ಲಿ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಗುತ್ತಿಗೆದಾರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಕಿ ಹಣ ಬಿಡುಗಡೆ ಮಾಡುವಂತೆ ಹಲವು ಬಾರಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಮನವಿಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಹೀಗಾಗಿ ಮಾ. ೫ರಂದು ಬೆಂಗಳೂರಿನಲ್ಲಿ ಕನಿಷ್ಟ ೩೦ ಸಾವಿರ ಗುತ್ತಿಗೆದಾರರು ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಅಂದು ರಾಜ್ಯಾದ್ಯಂತ ಎಲ್ಲ ಕಾಮಗಾರಿ ಸ್ಥಗಿತಗೊಳಿಸುತ್ತೇವೆ. ಆದರೂ ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಮಾಹಿತಿ ನೀಡಿ ಗುತ್ತಿಗೆದಾರರ ನಿಯೋಗ ತೆರಳಿದಾಗ ಸಿಎಂ ಭೇಟಿ ಮಾಡಿ ಹಾಗೆಯೇ ಕಳಿಸುತ್ತಾರೆ. ಇದುವರೆಗೆ ೮ ಸಚಿವರು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಗುತ್ತಿಗೆದಾರರ ಸಭೆಯನ್ನು ಅಧಿಕೃತವಾಗಿ ಕರೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರಿಗೆ ಕೇವಲ ಬಾಕಿ ಹಣ ಬಿಡುಗಡೆ ಮಾಡುವುದು ಮಾತ್ರವಲ್ಲದೆ, ಇನ್ನು ಹಲವು ಬೇಡಿಕೆಗಳಿವೆ. ಈ ಬಗ್ಗೆಯೂ ಸಿಎಂ ಸೇರಿದಂತೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕಾಮಗಾರಿ ನಡೆಸಲು ನಮ್ಮ ಆಸ್ತಿ ಆಭರಣ ಅಡಮಾನ ಇಟ್ಟಿದ್ದೇವೆ. ಸಂಬಂಧಿಕರ ಬಳಿಯೂ ಸಾಲ ಪಡೆದಿದ್ದು, ಅದನ್ನು ತೀರಿಸಲು ಸಾಧ್ಯವಾಗದೆ ಅವರಿಂದಲೂ ದೂರವಾಗುವ ಪರಿಸ್ಥಿತಿ ಎದುರಾಗಿದೆ. ನಾವು ಸರ್ಕಾರದ ಬಳಿ ಯಾವುದೇ ಸವಲತ್ತು ಕೇಳುತ್ತಿಲ್ಲ. ಬದಲಿಗೆ ನಮ್ಮ ಹಣ ನಮಗೆ ನೀಡಿ ಎನ್ನುವ ಬೇಡಿಕೆಯನ್ನಷ್ಟೇ ಇಟ್ಟಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಶಾಂತೇಗೌಡ, ಗುತ್ತಿಗೆದಾರರ ಸಂಘದ ಪ್ರಮುಖರಾದ ದಿನೇಶ್, ಗುರುಸಿದ್ದಪ್ಪ, ಮಂಜುನಾಥ್, ಗುರುರಾಜ್, ರವಿ ಚನ್ನಪ್ಪ, ರಂಗಸ್ವಾಮಿ, ಹೇಮಂತ್ ಕುಮಾರ್, ಸುಬ್ರಹ್ಮಣ್ಯ ಮತ್ತಿತರರಿದ್ದರು.
Symbolic protest by contractor in Bengaluru on 5th March
Leave a comment