ಚಿಕ್ಕಮಗಳೂರು : ವಿವಾದಿತ ಐ.ಡಿ ಪೀಠದ ಗರ್ಭಗುಡಿಯ ಗದ್ದುಗೆಗೆ ಕುಂಕುಮ ಹಾಕಿದ ವಿಷಯ ಇದೀಗ ಹೊಸ ಸಮಸ್ಯೆಗೆ ಕಾರಣವಾಗಿದ್ದು, ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಈ ಬಾರಿಯ ದತ್ತಮಾಲೆ ಕೊನೆಯ ದಿನ ದತ್ತಪೀಠದಲ್ಲಿ ದರ್ಶನ ಪಡೆದ ಭಕ್ತರು ವಾಪಸ್ ಹೋದ ನಂತರ ಕುಂಕುಮ ನಿತ್ಯ ಹಾಕಲಾಗುತ್ತಿದೆ ಎನ್ನಲಾಗಿದ್ದು, ನಂತರ ಪ್ರತಿದಿನ ಕುಂಕುಮ ಹಾಕಲಾಗಿದೆ ಎಂದು ಕೆಲ ಮುಸ್ಲಿಂ ಯುವಕರು ದತ್ತಪೀಠದಲ್ಲಿ ಪ್ರತಿಭಟನೆ ನಡೆಸಿದ್ದು, ಘಟನಾ ಸ್ಥಳಕ್ಕೆ ಮುಜರಾಯಿ ಇ.ಓ ರಂಗಪ್ಪ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ. ಆದರೂ ಘಟನೆಯ ನಂತರ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ದತ್ತಪೀಠದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಈ ನಡುವೆ ಕುಂಕುಮ ಹಾಕಿದ ಪ್ರಕರಣ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆ ಮೂಡಿದೆ. ವಿವಾದಿತ ಸ್ಥಳದಲ್ಲಿ ಹೊಸ ಆಚರಣೆ ನಡೆದಿದೆಯೇ ಎಂಬ ಗುಮಾನಿ ಕೂಡಾ ಮೂಡಿದ್ದು, ಜಿಲ್ಲಾಡಳಿತ ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದರ ಜೊತೆಗೆ ಇಂದು ಕೂಡ ಕೆಲ ಮುಸ್ಲಿಂ ಸಂಘಟನೆಗಳು ಹಾಗೂ ಶಾಖಾದ್ರಿ ಕುಟುಂಬಸ್ಥರು ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
Leave a comment