ಚಿಕ್ಕಮಗಳೂರು : ತಾಲೂಕಿನ ದತ್ತಪೀಠ, ಗುರು ಪರಂಪರೆಯ ತಪೋ ಭೂಮಿ. ಚಂದ್ರದ್ರೋಣ ಪರ್ವತಗಳ ಸಾಲಿನ ಗುರು ದತ್ತಾತ್ರೇಯರ ಪೀಠ ಹಿಂದೂಗಳ ಧಾರ್ಮಿಕ ಕ್ಷೇತ್ರ. ಆದರೆ, ಹಿಂದೂಗಳ ಅಂತಹಾ ಧಾರ್ಮಿಕ ಕ್ಷೇತ್ರದಲ್ಲಿ ಮುಜಾವರ್ ಗಳು ಮಾಂಸ ತಂದು ಓಡಾಡುತ್ತಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಆದ್ದರಿಂದ, ದತ್ತಪೀಠದಿಂದ ಮುಜಾವರ್ ಗಳನ್ನ ಹೊರಹಾಕಬೇಕು ಎಂದು ವಿಶ್ವಹಿಂದೂ ಪರಿಷದ್ ದಕ್ಷಿಣ ಕರ್ನಾಟಕದ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.
ದತ್ತಪೀಠದ ಮುಕ್ತಿಗಾಗಿ 25 ವರ್ಷಗಳಿಂದ ಭಜರಂಗದಳ-ವಿಶ್ವಹಿಂದೂ ಪರಿಷದ್ ನ ನಿರಂತರ ಹೋರಾಟದ ಫಲವಾಗಿ ಇಂದು ದತ್ತಪೀಠದಲ್ಲಿ ಅರ್ಚರ ನೇಮಕ, ತ್ರಿಕಾಲ ಪೂಜೆ ಜೊತೆ ಸರ್ಕಾರ ವ್ಯವಸ್ಥಾಪನಾ ಸಮಿತಿಯನ್ನೂ ನೇಮಿಸಿದೆ. ವಿ.ಎಚ್.ಪಿ. ಹಾಗೂ ಭಜರಂಗದಳದ ಹೋರಾಟದ ಫಲವಾಗಿ ಹಿಂದೂಗಳಿಗೆ ಜಯ ಸಿಕ್ಕಿದೆ. ಒಂದು ಹಂತದ ಹೋರಾಟ ಮುಗಿದಿದ್ದು, ದತ್ತಪೀಠವನ್ನ ಸಂಪೂರ್ಣ ಹಿಂದೂಗಳಿಗೆ ಬಿಟ್ಟು ಕೊಡಬೇಕೆಂಬ ಆಗ್ರಹದೊಂದಿಗೆ 2ನೇ ಹಂತದ ಹೋರಾಟ ಆರಂಭವಾಗಲಿದೆ ಎಂದರು. 25 ವರ್ಷಗಳ ಹೋರಾಟದ ಫಲವಾಗಿ ಇಂದು ಲಕ್ಷಾಂತರ ಹಿಂದೂಗಳು ದತ್ತಪೀಠಕ್ಕೆ ಬರುತ್ತಿದ್ದಾರೆ. ದತ್ತಪೀಠ ಮೋಜು-ಮಸ್ತಿ ಮಾಡುವ ಜಾಗ ಎಂದು ಭಾವಿಸಿದ್ದರು. ಆದರೆ, ನಮ್ಮ ಹೋರಾಟದ ಫಲವಾಗಿ ದತ್ತಪೀಠ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿದೆ.
ಹೇಗೆ, ನಮ್ಮ ಜನರಿಗೆ ರಾಮ ಮಂದಿರದ ಹೋರಾಟದ ಕಥೆಗಳು ಗೊತ್ತಿತ್ತು. ಈಗ, ಅದೇ ರೀತಿ ಹಿಂದೂಗಳು ದತ್ತಪೀಠದ ಹೋರಾಟದ ಬಗ್ಗೆ ಹಳ್ಳಿ- ಹಳ್ಳಿಯಲ್ಲಿ ತಿಳಿದುಕೊಂಡಿದ್ದಾರೆ. ಈ ಬಾರಿ 25ನೇ ವರ್ಷದ ರಜತ ಮಹೋತ್ಸವದ ದತ್ತಜಯಂತಿ ಅಂಗವಾಗಿ ರಾಜ್ಯಾದ್ಯಂತ ಸಂಕೀರ್ತನಾ ಯಾತ್ರೆ ಮಾಡಿದ್ದೇವೆ. 14ನೇ ತಾರೀಖು ರಾಜ್ಯದ ನಾನಾ ಭಾಗಗಳಿಂದ 25 ಸಾವಿರಕ್ಕೂ ಅಧಿಕ ದತ್ತ ಭಕ್ತರು ಆಗಮಿಸಲಿದ್ದಾರೆ. ಅಂದು ಶೋಭಾಯಾತ್ರೆಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು. ಮಂಡ್ಯ ನಾಗಮಂಗಲ, ದಾವಣಗೆರೆ, ಮಂಗಳೂರಿನ ಹಲವೆಡೆ ಗಣಪತಿ ಮೆರವಣಿಗೆ ವೇಳೆ ಅಹಿತಕರ ಘಟನೆಗಳು ನಡೆದಿವೆ. ಬಂದೋಬಸ್ತ್ ಮಾಡಿದ್ದರು ಕೂಡ ಅಂಗಡಿಗೆ ಬೆಂಕಿ ಹಾಕಿದ್ದರು. ಕಲ್ಲು ತೂರಿದ್ದರು. ಇದರಲ್ಲಿ ನಿಷೇಧಿತ ಸಂಘಟನೆಯ ಕೈವಾಡದ ಸಂಶಯವಿದೆ. ಈ ಘಟನೆಗಳಿಗೆ ಕೇರಳದಿಂದ ಜನ ಬಂದಿದ್ದರು. ಹಾಗಾಗಿ, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಚಂದ್ರದ್ರೋಣ ಪರ್ವತಗಳ ಸಾಲಿನ ದತ್ತಪೀಠ ಕ್ಷೇತ್ರದಲ್ಲಿ ಇರುವ ಔದಂಬರ ವೃಕ್ಷ ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದೆ. ದತ್ತಾತ್ರೇಯರು ತಪಸ್ಸು ಮಾಡಿದ ಜಾಗದಲ್ಲಿ ಔದಂಬರ ವೃಕ್ಷವಿದ್ದು, ಪರಿಕ್ರಮ ಮಾಡಲು ಜಿಲ್ಲಾಡಳಿತ ಭಕ್ತರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಸಂಘಟನೆ ಕೋರಿರುವ 3 ದಿನಗಳ ಕಾಲ ನಡೆಯುವ ಹೋಮ-ಹವನ ನಡೆಸಲು ಸರ್ಕಾರಕ್ಕೆ ಬರೆದಿದ್ದೇವೆ. ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಿದ್ದು, ಪವಿತ್ರವಾದ ಗರ್ಭಗುಡಿಯಲ್ಲಿ ದತ್ತಪಾದುಕೆ ಪೂಜೆ, ಹೋಮ-ಹವನ ನಡೆಯುತ್ತಿದ್ದು, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಕಾರಣಿಕ ಮಹಿಮಾ ಕ್ಷೇತ್ರದಲ್ಲಿ ಗೋಮಾಂಸ ತಂದು ಮುಜವಾರುಗಳ ಓಡಾಡುತ್ತಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಆದ್ದರಿಂದ ಮುಜವಾರುಗಳನ್ನು ಪೀಠದಿಂದ ಹೊರ ಹಾಕಬೇಕೆಂದು ಆಗ್ರಹಿಸಿದ್ದಾರೆ.
Leave a comment