ಚಿಕ್ಕಮಗಳೂರು: ಬಡವರ ಬದುಕಿನ ಬಗ್ಗೆ ಕಾಳಜಿ ವಹಿಸುತ್ತಿರುವ ರಾಜ್ಯಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಕ್ಷೇತ್ರದ ಜೋಡಿಹೋಚಿಹಳ್ಳಿ ಗ್ರಾಮದಲ್ಲಿ ಕಾರ್ಮಿಕ ಇಲಾಖೆ ಏರ್ಪಡಿಸಲಾಗಿದ್ದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಸ್ಮಾರ್ಟ್‌ಕಾರ್ಡ್ ವಿತರಣೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಬದುಕು ಕಟ್ಟಿಕೊಡುತ್ತಿರುವ ದಾಖಲೆ ಆಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಡವರ ಬದುಕಿಗೆ ಪೂರಕವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬಡ ಕಾರ್ಮಿಕರ ಪರವಾದ ಆಟೋ ಚಾಲಕರಿಗೆ ಅಪಘಾತವಾದರೆ ನೋಂದಣಿ ಮಾಡಿಸಿದ್ದ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆಂದರು.
ಅಲೆಮಾರಿ ಜನಾಂಗ ಸೇರಿದಂತೆ ಸುಮಾರು ೧೦೧ ಜನಾಂಗಗಳಿದ್ದು, ಅವರಿಗೆಲ್ಲ ಡಾ. ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತಿದೆ. ಇದರಿಂದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ನಾಮಿನಿ ಸದಸ್ಯರಿಗೆ ೧ ಲಕ್ಷ ರೂ. ಚಿಕಿತ್ಸಾ ವೆಚ್ಚಕ್ಕಾಗಿ ೫೦ ಸಾವಿರ ರೂ. ನೀಡಲಾಗುತ್ತಿದೆ ಎಂದು ಹೇಳಿದರು.
ವಯೋಸಹಜವಾಗಿ ಮೃತಪಟ್ಟವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚಕ್ಕೆಂದು ೧೦ ಸಾವಿರ ರೂ. ನೀಡಲಾಗುತ್ತಿದ್ದು, ಈ ರೀತಿ ಬಡವರ ಪರವಾದ ಚಿಂತನೆ ಮಾಡುವ ಕಾಂಗ್ರೆಸ್ ಪಕ್ಷದ ಸರ್ಕಾರ, ಬಡವರ ಪರವಾದ ಶಾಸಕರನ್ನು ಆಯ್ಕೆಮಾಡಿದ ಪರಿಣಾಮ ಹಲವು ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಗಣೆಹಳ್ಳಿ ಗ್ರಾ.ಪಂ ಅಧ್ಯಕ್ಷ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಕುಮಾರಪ್ಪ, ಗೋವಿಂದಸ್ವಾಮಿ, ಸಂತೋಷ್, ಸುರೇಶ್, ಸಣ್ಣಪ್ಪ, ಮಂಜಪ್ಪ, ನಂಜಣ್ಣ, ಅಣ್ಣಪ್ಪನಾಯ್ಕ, ಮಂಜುನಾಯ್ಕ ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Several pro-people schemes for unorganized workers
Leave a comment