ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಾಧಾರ ಜಲಪಾತದ ಬಳಿ ನಾಪತ್ತೆಯಾಗಿರುವ ಕೇರಳ ಮೂಲದ ಬಾಲಕಿಯ ಪತ್ತೆಗಾಗಿ ಎರಡನೇ ದಿನವೂ ಶೋಧ ಕಾರ್ಯ ತೀವ್ರಗೊಂಡಿದೆ.
ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ಬಾಲಕಿ ಶ್ರೀನಂದಾ ಕಾಣೆಯಾಗಿದ್ದು, ಅಂದು ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಬುಧವಾರ 60 ಜನರ ತಂಡ ಶೋಧ ನಡೆಸಿದ್ದರೆ, ಇಂದು ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳು ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು ದಟ್ಟ ಅರಣ್ಯ ಮತ್ತು ಕಂದಕಗಳಿರುವ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಶೋಧ ಕಾರ್ಯಕ್ಕಾಗಿ ಡಾಗ್ ಸ್ಕ್ಯಾಡ್ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಡೋನ್ ಹಾಗೂ ಥರ್ಮಲ್ ಡೋನ್‌ಗಳನ್ನು ಬಳಸಲಾಗುತ್ತಿದೆ.
ಸ್ಥಳೀಯರ ನೆರವಿನೊಂದಿಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ದತ್ತಪೀಠದ ಮಾಣಿಕ್ಯಾಧಾರ ಬಳಿ ಕೇರಳ ಮೂಲದ ಬಾಲಕಿ ಶ್ರೀನಂದಾ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಇಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮಾ ಅವರಿಂದ ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲಿರುವ ಅವರು, ಎಸ್ಪಿಯವರೊಂದಿಗೆ ಮಾಣಿಕ್ಯಾಧಾರದ ನಾಪತ್ತೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಮಂಗಳವಾರ ಸಂಜೆ 6:30ರಿಂದ ನಾಪತ್ತೆಯಾಗಿರುವ ಬಾಲಕಿಯ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯದ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ಪಡೆದು, ಮುಂದಿನ ಕಾರ್ಯಾಚರಣೆಗೆ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ.
ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ 100ಕ್ಕೂ ಹೆಚ್ಚು ಸಿಬ್ಬಂದಿ ಸತತವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಶೋಧಕ್ಕಾಗಿ ಡಾಗ್ ಸ್ಕ್ಯಾಡ್, ಡೋನ್ ಹಾಗೂ ಥರ್ಮಲ್ ಡೋನ್‌ಗಳನ್ನು ಬಳಸಲಾಗುತ್ತಿದ್ದು,
ಎಸ್‌ಡಿಆರ್‌ಎಫ್ ತಂಡ ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಪತ್ತೆಗಾಗಿ ಹಗಲಿರುಳು ತೀವ್ರ ಹುಡುಕಾಟ ಮುಂದುವರೆದಿದೆ.
Search continues for second day for missing girl
Leave a comment