ಶೃಂಗೇರಿ: ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈಗ ಅತ್ಯಂತ ಮಹತ್ವದ ಆದೇಶವನ್ನು ಹೊರಡಿಸಿದೆ. ಅಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು.
ಈ ಅಲ್ಪ ಮತಗಳ ಅಂತರದ ಗೆಲುವಿನಲ್ಲಿ ಅಕ್ರಮ ನಡೆದಿದೆ ಮತ್ತು ಅಂಚೆ ಮತಗಳ ಎಣಿಕೆಯ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ಡಿ.ಎನ್. ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್, ಅಂಚೆ ಮತಗಳನ್ನು ಮರು ಎಣಿಕೆ ಮಾಡುವಂತೆ ಈಗ ಸ್ಪಷ್ಟ ನಿರ್ದೇಶನ ನೀಡಿದೆ. ಈ ಪ್ರಕರಣವು ಈ ಹಿಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತಾದರೂ, ಅಕ್ರಮಗಳ ಕುರಿತ ವಿಚಾರಣೆಯನ್ನು ಮುಂದುವರಿಸಲು ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿತ್ತು. ಅದರ ಬೆನ್ನಲ್ಲೇ ಈಗ ಮರು ಎಣಿಕೆಯ ಆದೇಶ ಬಂದಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ವಿಶೇಷವೆಂದರೆ, ಇದೇ ಮಾದರಿಯ ಮತ್ತೊಂದು ಪ್ರಕರಣ ಮಾಲೂರು ಕ್ಷೇತ್ರದಲ್ಲಿಯೂ ನಡೆದಿತ್ತು, ಅಲ್ಲಿಯೂ ಮರು ಎಣಿಕೆಗೆ ಆದೇಶಿಸಲಾಗಿತ್ತು. ಇದೀಗ ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತಗಳ ಮರು ಎಣಿಕೆಯ ನಂತರ ರಾಜಕೀಯ ಚಿತ್ರಣ ಬದಲಾಗಲಿದೆಯೇ ಅಥವಾ ರಾಜೇಗೌಡರ ಗೆಲುವು ಸುಭದ್ರವಾಗಿರಲಿದೆಯೇ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.
Recount of postal votes in Sringeri assembly constituency
Leave a comment