ಚಿಕ್ಕಮಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಎಫ್.ಟಿ.ಎಸ್.ಈ.೧ ರ ನ್ಯಾಯಾಧೀಶರು ೨೦ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಯೋಗೀಶ ಅಲಿಯಾಸ್ ಯೋಗೇಂದ್ರ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ. ಮೂಡಿಗೆರೆ ತಾಲ್ಲೂಕು ಬಾಳೂರು ಸಮೀಪದ ಆಮ್ತಿ ಗ್ರಾಮದ ಯೋಗೀಶ ೨೦೨೪ರ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ಚೇಣಿ ಕೆಲಸಕ್ಕೆ ಬಂದಿದ್ದು, ಅದೇ ಗ್ರಾಮದ ಅಪ್ತಾಪ್ತೆಯ ಮನೆಯಲ್ಲೇ ವಾಸವಾಗಿದ್ದ. ಈ ಸಂದರ್ಭದಲ್ಲಿ ಮನೆಯವರು ಯಾರೂ ಇಲ್ಲದ ಸಂದರ್ಭದಲ್ಲಿ ಆಕೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಪುಸಲಾಯಿಸಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದು, ಕಳೆದ ಡಿಸೆಂಬರ್ ೨೧ ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಕೃತ್ಯ ಎಸಗಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಮೂಡಿಗೆರೆಯ ಅಂದಿನ ವೃತ್ತ ನಿರೀಕ್ಷಕ ಪಿ.ಪಿ.ಸೋಮೇಗೌಡ ಮತ್ತು ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಎಫ್.ಟಿ.ಎಸ್.ಈ.೧ರ ನ್ಯಾಯಾಧೀಶರಾದ ರಾಘವೇಂದ್ರ ಗುರುಪ್ರಸಾದ್ ಕುಲಕರ್ಣಿ ಅವರು ಯೋಗೀಶನ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಭಾರತೀಯ ದಂಡ ಸಂಹಿತೆಯ ಕಲಂ ೩೭೬(೨)(ಎಫ್)(ಎನ್) ಅಡಿಯಲ್ಲಿ ಆತನಿಗೆ ೧೦ ವರ್ಷ ಕಠಿಣ ಸಜೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾಧಾರಣ ಸಜೆ ಮತ್ತು ಕಲಂ ೩೭೬(೩)ರಡಿಯಲ್ಲಿ ೨೦ ವರ್ಷ ಕಠಿಣ ಸಜೆ ಮತ್ತು ೨೫ ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾಧಾರಣ ಸಜೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಭರತ್‌ಕುಮಾರ್ ವಾದ ಮಂಡಿಸಿದ್ದರು.
Rape accused gets 20 years rigorous imprisonment
Leave a comment