ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡನ್ನು ಬೆಚ್ಚಿಬೀಳಿಸಿದೆ.
ನಗರದ ಪುನೀತ್ ಅಲಿಯಾಸ್ ಅಪ್ಪು ಎಂಬ ಯುವಕ ತನ್ನ ಪೋಷಕರು ಬಿಟ್ಟುಹೋಗಿದ್ದ ಎರಡು ಸಣ್ಣ ಮನೆಗಳ ಹಕ್ಕಿಗಾಗಿ ಹೋರಾಡುತ್ತಿದ್ದನು. ಆದರೆ ಆತನ ಸ್ವಂತ ಅತ್ತೆಯೇ ಈ ಆಸ್ತಿಗೆ ಅಡ್ಡಗಾಲಾಗಿದ್ದು, ಪುನೀತ್ ತಂದೆ ತಮ್ಮ ಬಳಿ ಹಣ ಪಡೆದಿದ್ದಾರೆ ಎಂಬ ಕಾರಣ ನೀಡಿ ಮನೆ ಬಿಟ್ಟುಕೊಡಲು ನಿರಾಕರಿಸಿದ್ದರು. ಎನ್ನಲಾಗಿದೆ.
ಈ ಸಂಬಂಧ ನ್ಯಾಯ ಕೇಳಲು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಬಂದಿದ್ದ ಪುನೀತ್, ಅಲ್ಲಿಯೂ ತನಗೆ ನ್ಯಾಯ ಸಿಗುವುದಿಲ್ಲ ಎಂಬ ಹತಾಶೆಯಿಂದ ಪೊಲೀಸರ ಕಣ್ಣೆದುರೇ ಬೇಡ್ನಿಂದ ತನ್ನ ಕತ್ತು ಕುಯ್ದುಕೊಂಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ತಕ್ಷಣವೇ ಪೊಲೀಸರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕುತ್ತಿಗೆಯ ಭಾಗದಲ್ಲಿ ತೀವ್ರ ಗಾಯವಾಗಿದ್ದ ಕಾರಣ ವೈದ್ಯರು 11 ಹೊಲಿಗೆಗಳನ್ನು ಹಾಕಿದ್ದಾರೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಪುನೀತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬೆನ್ನಲ್ಲೇ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಸ್ತುತ ಆತನ ಅತ್ತೆ ಶಿವಮೊಗ್ಗದಲ್ಲಿದ್ದು, ಆಸ್ತಿಗಾಗಿ ಸಂಬಂಧಗಳು ಹೇಗೆ ಬಲಿಯಾಗುತ್ತಿವೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಈ ಸಂಬಂಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
ಒಟ್ಟಾರೆಯಾಗಿ, ಆಸ್ತಿಗಾಗಿ ಹುಟ್ಟಿದ ಹಠ ಅನಾಥ ಯುವಕನೊಬ್ಬನನ್ನು ಸಾವಿನ ಕೂಪಕ್ಕೆ ತಳ್ಳುವ ಹಂತಕ್ಕೆ ತಲುಪಿದ್ದು, ಮನುಷ್ಯ ಸಂಬಂಧಗಳ ನಡುವಿನ ಕಂದಕವನ್ನು ಎತ್ತಿ ತೋರಿಸಿದೆ.
ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಹತಾಶೆಯಿಂದ ಈ ಸಾಹಸಕ್ಕೆ ಕೈಹಾಕಿದ ಪುನೀತ್ನ ಪರಿಸ್ಥಿತಿ ಈಗ ಸಾರ್ವಜನಿಕರಲ್ಲಿ ಮರುಕ ಉಂಟುಮಾಡಿದ್ದು ಯುವಕನಿಗೆ ಸೂಕ್ತ ನ್ಯಾಯ ಸಿಗಬೇಕು ಎಂಬ ಮಾತುಗಳು ಕೇಳಿ ಬಂದಿವೆ..
Property dispute – Suicide attempt in front of police station
Leave a comment