ಚಿಕ್ಕಮಗಳೂರು: ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರ್ಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ವಿಮಾ ಹಣವನ್ನು ಭರಿಸದ ವಿಮಾ ಕಂಪನಿಯ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಡ್ಡಿ ಸಹಿತ ಹಣ ಪಾವತಿಸುವಂತೆ ಆದೇಶ ನೀಡಿದೆ.
ಕಡೂರು ಪಟ್ಟಣದ ಕೆ.ಎಂ.ದಿನೇಶ್ ಎಂಬುವವರು ನಗರದ ಮಧುವನ ಲೇಔಟ್‌ನಲ್ಲಿರುವ ಮೆ| ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ಸಂಬಂಧಿಸಿದಂತೆ ಮೆ| ಎಕ್ಸೈಡ್ ಜೀವ ವಿಮಾ ಕಂಪನಿಯ ಚಿಕ್ಕಮಗಳೂರು ಶಾಖೆಯಿಂದ ವಿಮೆಯನ್ನು ಪಡೆದುಕೊಂಡಿದ್ದರು. ದುರದೃಷ್ಟವಶಾತ್ ೨೦೨೩ರ ಅಕ್ಟೋಬರ್ ೨೬ ರಂದು ದಿನೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು.
ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ವಿಮಾ ಕಂಪನಿಯಿಂದ ವಿಮಾ ಪರಿಹಾರದ ಮೊತ್ತವನ್ನು ನೀಡುವಂತೆ ಕೋರಿದ್ದರೂ ವಿಮಾ ಕಂಪನಿ ಹಣ ಪಾವತಿಸದೆ ಸೇವಾ ನ್ಯೂನತೆ ಎಸಗಿತ್ತೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ೨೦೨೫ರ ಜುಲೈ ೮ ರಂದು ಮೆ| ಎಕ್ಸೈಡ್ ಜೀವ ವಿಮಾ ಕಂಪನಿಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕರು ಹಾಗೂ ಚಿಕ್ಕಮಗಳೂರು ಶಾಖಾ ವ್ಯವಸ್ಥಾಪಕರು, ಮೆ|ಶಿಕ್ಷಕರ ಸಹಕಾರ ಬ್ಯಾಂಕ್‌ನ ಉಡುಪಿ ಪ್ರಧಾನ ಕಚೇರಿ ಮತ್ತು ಚಿಕ್ಕಮಗಳೂರು ಶಾಖೆಯ ವ್ಯವಸ್ಥಾಪಕರುಗಳ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಜನವರಿ ೨೩ ರಂದು ತೀರ್ಪು ನೀಡಿದ್ದು, ಮೆ| ಎಕ್ಸೈಡ್ ಜೀವ ವಿಮಾ ಕಂಪನಿಯ ಬೆಂಗಳೂರು ಕಚೇರಿ ಹಾಗೂ ಚಿಕ್ಕಮಗಳೂರು ಶಾಖಾ ಕಚೇರಿಯ ವಿರುದ್ಧದ ದೂರನ್ನು ಖರ್ಚಿನೊಂದಿಗೆ ಭಾಗಶಃ ಪುರಸ್ಕರಿಸಿ ಮೆ|ಶಿಕ್ಷಕರ ಸಹಕಾರಿ ಬ್ಯಾಂಕ್‌ನ ಉಡುಪಿ ಪ್ರಧಾನ ಕಚೇರಿ ಮತ್ತು ಚಿಕ್ಕಮಗಳೂರು ಶಾಖೆ ವಿರುದ್ಧದ ದೂರನ್ನು ವಜಾಗೊಳಿಸಿದೆ.
ವಿಮಾ ಕಂಪನಿಯು ವಿಮಾ ಪರಿಹಾರ ಮೊತ್ತ ೧೧.೫೦ ಲಕ್ಷ ರೂ.ಗಳನ್ನು ೨೦೨೪ರ ಫೆಬ್ರವರಿ ೮ ರಿಂದ ಇದುವರೆಗೆ ವಾರ್ಷಿಕ ಶೇ.೯ರ ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಪರಿಹಾರವಾಗಿ ೪೦ ಸಾವಿರ ರೂ. ಹಾಗೂ ವ್ಯಾಜ್ಯದ ಖರ್ಚು-ವೆಚ್ಚವೆಂದು ೧೦ ಸಾವಿರ ರೂ.ಗಳನ್ನು ಜಯಂತಿ ಅವರಿಗೆ ನೀಡುವಂತೆ ಆದೇಶ ನೀಡಲಾಗಿದೆ. ತಪ್ಪಿದಲ್ಲಿ ಆದೇಶದ ಮೊತ್ತಕ್ಕೆ ಶೇ.೬ ಭವಿಷ್ಯ ಬಡ್ಡಿಯನ್ನು ಪಾವತಿಸುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ,ಬಮ್ಮನಕಟ್ಟಿ ಅವರು ಈ ತೀರ್ಪನ್ನು ಪ್ರಕಟಿಸಿದ್ದು, ಗ್ರಾಹಕರ ಹಿತರಕ್ಷಣೆ ಮಾಡಲಾಗಿದೆ.
ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲರಾದ ಎಂ.ಕೆ.ರಮೇಶ್ ಅವರು ವಾದ ಮಂಡಿಸಿದ್ದರು.
Order to pay insurance compensation with interest
Leave a comment