ಚಿಕ್ಕಮಗಳೂರು: ಬೆರಟಿಕೆರೆ ತುಂಬಿಸುವ ಕಾಮಗಾರಿಗೆ ಎದುರಾಗಿರುವ ಸಮಸ್ಯೆಯನ್ನು ಎರಡೂ ಕಡೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಕೋಡಿ ಬಿದ್ದ ಅಯ್ಯನ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು, ಅಯ್ಯನ ಕೆರೆ ಕೋಡಿ ಬಿದ್ದ ನೀರನ್ನ ಲಿಫ್ಟ್ ಮಾಡಿ ಬೆರಟಿ ಕೆರೆ ತುಂಬಿಸುವ ಯೋಜನೆಗೆ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ೯.೯೦ ಕೋಟಿ ರೂ., ಮಂಜೂರು ಮಾಡಿಸಿದ್ದೆವು. ಈಗ ಕಾಮಗಾರಿ ಸಂದರ್ಭದಲ್ಲಿ ವಿವಾದವಾಗಿದೆ. ಇದಕ್ಕೆ ಕಾರಣ ಗೊತ್ತಿಲ್ಲ. ಯಾರಿಗೂ ತೊಂದರೆ ಆಗದಂತೆ ರೈತರಲ್ಲಿರುವ ಆತಂಕ ದೂರ ಮಾಡಲು ಸಮಸ್ಯೆ ಬಗೆಹರಿಸಿ ಕಾಮಗಾರಿ ಮಾಡಬೇಕು. ಯಾರನ್ನೂ ಭಯಕ್ಕೆ ದೂಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೆತ್ತಿಕೊಳ್ಳುವ ಕೆಲಸವನ್ನ ಎರಡೂ ಕಡೆ ಶಾಸಕರು, ಸಚಿವರು, ಜಿಲ್ಲಾಡಳಿತ ಮಾಡಬೇಕು ಎಂದು ವಿನಂತಿಸುತ್ತೇನೆ ಎಂದರು.
ನೀರು ಜೀವ ಜಲ. ಅದು ಬದುಕು ಸುಡುವ ಬೆಂಕಿ ಆಗಬಾರದು. ಕೆಳಭಾಗದ ಜನರಿಗೆ ನಮ್ಮ ಪರಿಸ್ಥಿತಿ ಏನಾಗುತ್ತದೆ ಎನ್ನುವ ಭಯ ಇದೆ ಅದನ್ನು ನಿವಾರಿಸಬೇಕು. ಎಷ್ಟು ಪ್ರಮಾಣದ ನೀರು ಯಾವಾಗ ತೆಗೆಯಲಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿ ಕರಾರು ಪತ್ರ ಮಾಡಿಕೊಡಬೇಕು ಎಂದರು.
ಕೆಳಬಾಗದಲ್ಲಿರುವವರು ರೈತರೇ, ಮೇಲ್ಭಾಗದಲ್ಲಿರುವವರೂ ರೈತರೇ, ಎಲ್ಲರೂ ನಮ್ಮವರೇ, ಎಲ್ಲರೂ ಕಳ್ಳು ಬಳ್ಳಿ ಸಂಬಂಧ ಇರುವುದರಿಂದ ಸಮಸ್ಯೆ ಬಗೆಹರಿಸಲು ಅಧಿಕಾರ ಬಳಸಬಾರದು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು. ಇದು ಬಗೆಹರಿಸಲಾಗದ ಸಮಸ್ಯೆ ಅಲ್ಲ, ಅಂತರಾಜ್ಯ ವಿವಾದಗಳನ್ನೇ ಬಗೆಹರಿಸುತ್ತೇವೆ. ಇದು ಗ್ರಾಮ ಗ್ರಾಮಗಳ ನಡುವಿನ ಸಮಸ್ಯೆ ಎರಡೂ ಕಡೆಯವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಭಾರತ ಸಂಸ್ಕಾರಯುತವಾದ ರಾಷ್ಟ್ರ. ಪ್ರಕೃತಿಯನ್ನ ಪಂಚಭೂತಗಳು ಎಂದು ಪೂಜಿಸುತ್ತೇವೆ. ಜಗತ್ತಿನ ಸೃಷ್ಠಿಯಾಗಿರುವುದೇ ನೀರು, ಭೂಮಿ, ಅಗ್ನಿ, ಆಕಾಶ ಮತ್ತು ವಾಯುವಿನಿಂದ. ಈ ಐದು ತತ್ವಗಳು ಎಲ್ಲಾ ವಸ್ತುಗಳಲ್ಲೂ ಇವೆ. ಈ ಕಾರಣಕ್ಕೆ ಭಗವತ್‌ಸ್ವರೂಪಿಯಾಗಿ ಆರಾಧಿಸುವ ಮತ್ತು ಉಪಕಾರ ಸ್ಮರಣೆ ಮಾಡುವುದು ಭಾರತೀಯ ಂಸ್ಕೃತಿ. ಈ ಕಾರಣಕ್ಕೆ ನಮ್ಮ ಪೂರ್ವಿಕರು ಕೆರೆ, ಕಟ್ಟೆ ತುಂಬಿದಾಗ ಗಂಗಾ ಮಾತೆ ಪೂಜಿಸುವ ಪದ್ಧತಿ ತಂದಿದ್ದಾರೆ ಎಂದರು.
ಗಿರಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಅಯ್ಯನ ಕೆರೆ ಮತ್ತು ಮದಗದ ಕೆರೆ ಎರಡೂ ಭರ್ತಿಯಾಗಿ ಗಂಗಾ ಪೂಜೆ ನೆರವೇರಿಸಿದ್ದೇವೆ. ಪ್ರತಿ ವರ್ಷ ಈ ರೀತಿ ಗಂಗೆ ತುಂಬಿ ಹರಿಯಲಿ, ಅದರಿಂದ ಕೆರೆ ಕಟ್ಟೆಗಳು ತುಂಬಿ, ಜನ ಜಾನುವಾರುಗಳು ಸಂತೃಪ್ತಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ನಾವು ಪ್ರವಾಸೋದ್ಯಮ ಸಚಿವರಾಗಿದ್ದಾಗ ವಿಶೇಷವಾಗಿ ಅಯ್ಯನ ಕೆರೆಗೆ ೮.೮೪ ಕೋಟಿ ರೂ. ಮಂಜೂರು ಮಾಡಿಸಿದ್ದೆವು. ಈಗಲೂ ಅದೇ ಹಣದಲ್ಲಿ ಕೆಲಸ ನಡೆಯುತ್ತಿದೆ. ಇದಲ್ಲದೆ ಲೋಕೋಪಯೋಗಿ ಇಲಾಖೆಯಿಂದ ಒಮ್ಮೆ ೭ ಕೋಟಿ ರೂ. ಮಂಜೂರು ಮಾಡಿಸಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಒಮ್ಮೆ ೩.೮೨ ಕೋಟಿ ರೂ. ಕೆರೆ ಏರಿ ದುರಸ್ಥಿಗೆ ಮಂಜೂರು ಮಾಡಿಸಿದ್ದೆವು. ನಾಲ್ಕು ಕಾಲುವೆಗ ಅಬಿವೃದ್ದಿಗೆ ೧೧ ಕೋಟಿ ರೂ. ಸೇರಿ ಒಟ್ಟು ಸಣ್ಣ ನೀರಾವರಿ ಇಲಾಖೆಯಿಂದ ೧೪.೩೨ ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯಿಂದ ೮.೮೪ ಕೋಟಿ., ಲೋಕೋಪಯೋಗಿ ಇಲಾಖೆ ವತಿಯಿಂದ ೭ ಕೋಟಿ ಮಂಜೂರು ಮಾಡಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ಪಾದಮನೆ ಸ್ವಾಮಿ, ಸಖರಾಯಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರಾಜಮ್ಮ, ಪಿಳ್ಳೇನಹಳ್ಳಿ ಪಂಚಾಯ್ತಿ ಸದಸ್ಯರು, ಜಿ.ಪಂ. ಮಾಜಿ ಉಪಾಧ್ಯಕ್ಷ ಗುಣಸಾಗರ ವಿಜಯಕುಮಾರ್, ಲೋಕೇಶ್, ಲೋಕೇಶ್ ಮಾಸ್ಟರ್, ಪ್ರಕಾಶ್, ಯೋಗೀಶ್, ರಾಜೇಶ್, ದಿನೇಶ್ ಇತರರು ಇದ್ದರು
Offering of CT Ravi bag to Ayyanakere where Kodi died
Leave a comment