ಚಿಕ್ಕಮಗಳೂರು: ತಂಗಿಯನ್ನು ಕೊಲೆಗೈದಿದ್ದ ಭಾವನನ್ನು ಬಾಮೈದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಕುರಕುಚ್ಚಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಚರಣ್ (೨೩) ಕೊಲೆಯಾದ ದುರ್ದೈವಿ. ಆರೋಪಿಗಳಾದ ಚರಣ್ ಅವರ ಬಾಮೈದ ಸಂತೋಷ್ ಹಾಗೂ ಸಚಿನ್ ನಾಯಕ್ ಅವರನ್ನು ಲಕ್ಕವಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಚರಣ್ ಅವರು ಸಂತೋಷ್ ಅವರ ತಂಗಿ ಮೇಘನಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ತನ್ನನ್ನು ಬಿಟ್ಟು ತವರಿಗೆ ಹೋದಳು ಎಂಬ ಕಾರಣಕ್ಕೆ ಚರಣ್ ೨೦೨೪ರ ಏಪ್ರಿಲ್ ೨೯ ರಂದು ಪತ್ನಿ ಮೇಘನಾ ಬಟ್ಟೆ ತೊಳೆಯಲು ಹೋದಾಗ ಅವರನ್ನು ಕೊಲೆ ಮಾಡಿ ಶವವನ್ನು ಕಾಲುವೆಗೆ ಬಿಸಾಕಿದ್ದ. ಪತ್ನಿ ಕೊಲೆಗೈದು ಜೈಲು ಸೇರಿದ್ದ ಚರಣ್, ಮೂರು ತಿಂಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.
ಚರಣ್ ಅವರು ವರ ಮಹಾಲಕ್ಷ್ಮಿ ಹಬ್ಬಕ್ಕೆ ಊರಿಗೆ ಬಂದು ವಾಪಸ್ ಬಾವಿಕೆರೆಯಿಂದ ಕರಕುಚ್ಚಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂತೋಷ್ ಹಾಗೂ ಆತನ ಸ್ನೇಹಿತ ಸಚಿನ್ ನಾಯಕ್ ಅವರುಗಳು ಮಾರಕಾಸ್ತ್ರಗಳಿಂದ ಚರಣ್ ಮೇಲೆ ಹಲ್ಲೆ ನಡೆಸಿ ಆತನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಲು ತರೀಕೆರೆ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರು ತಿಳಿಸಿದ್ದಾರೆ.
Man murdered in Karakuchi village two arrested
Leave a comment