ಚಿಕ್ಕಮಗಳೂರು: ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯನ್ನು ಜನಸಂಖ್ಯೆ ಆಧಾರದಲ್ಲಿ ಮಾಡಬಾರದು. ಅದು ಭೌಗೋಳಿಕ ಆಧಾರದಲ್ಲಿ ಮಾಡಿದರೆ ಮಾತ್ರ ದಕ್ಷಿಣ ರಾಜ್ಯಗಳಿಗೆ ನ್ಯಾಯ ಸಿಗಲಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಪಾದಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆಯಲ್ಲಿ ಸದ್ಯಕ್ಕೆ ೫೪೩ ಲೋಕಸಭಾ ಕ್ಷೇತ್ರಗಳಿವೆ. ಮುಂದೆ ಕ್ಷೇತ್ರ ಮರುವಿಂಗಡಣೆಯಾದಲ್ಲಿ ೮೪೮ ಲೋಕಸಭಾ ಕ್ಷೇತ್ರಗಳಾಗಲಿವೆ. ಜನಸಂಖ್ಯೆ ಆಧಾರದಲ್ಲಿ ಪುನರ್ ವಿಂಗಡಣೆ ಮಾಡಿದರೆ ಉತ್ತರ ಭಾರತಕ್ಕೆ ಸರಿ ಸುಮಾರು ೫೫೦ ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳು ಲಭಿಸಲಿವೆ. ದಕ್ಷಿಣ ಭಾರತದ ರಾಜ್ಯಗಳು ಕನಿಷ್ಠ ೪೪೦ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಹೀಗಾದಲ್ಲಿ ಪ್ರತಿ ಬಾರಿಯೂ ಉತ್ತರ ಭಾರತದವರೇ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದರಿಂದ ದಕ್ಷಿಣ ಭಾರತದ ಕಡೆಗಣನೆ ಆಗುವುದು ನಿಶ್ಚಿತ ಎಂದು ಹೇಳಿದರು.
ದಕ್ಷಿಣ ಭಾರತದ ಎಲ್ಲ ತೆರಿಗೆಗಳು ಈಗಾಗಲೇ ಉತ್ತರ ಭಾರತದ ಪಾಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಶೇ.೧೩ ರಷ್ಟು ಜಿಎಸ್‌ಟಿ ಪಾಲು ನೀಡಲಾಗುತ್ತಿದೆ. ರಾಜ್ಯದಿಂದ ೫ ಲಕ್ಷ ಕೋಟಿ ರೂ. ಜಿಎಸ್‌ಟಿ ಕೇಂದ್ರಕ್ಕೆ ಹೋಗುತ್ತದೆ. ಅದರಲ್ಲಿ ನಮಗೆ ಸಿಗುತ್ತಿರುವುದು ಕೇವಲ ೪೦ ಸಾವಿರ ಕೋಟಿ ರೂ. ಮಾತ್ರ ಎಂದು ತಿಳಿಸಿದರು.
ದಕ್ಷಿಣ ಭಾರತದ ತೆರಿಗೆ ಪಾಲು ಉತ್ತರಕ್ಕೆ ಹೋದಲ್ಲಿ ದಕ್ಷಿಣ ರಾಜ್ಯಗಳು ದಿವಾಳಿಯಾಗುತ್ತವೆ. ಉದ್ಯೋಗ ಮತ್ತಿತರೆ ಮೂಲಸೌಕರ್ಯಗಳ ಅಭಿವೃದ್ಧಿ ಯಾವುದೂ ಕೂಡ ನಡೆಯುವುದಿಲ್ಲ. ಉತ್ತರ ಭಾರತದ ಪ್ರಬಲ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಆ ಭಾಗದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ವಿನಾಃ ದಕ್ಷಣ ರಾಜ್ಯಗಳೂ ಅವಗಣನೆಗೆ ಒಳಗಾಗುವುದು ಖಚಿತ. ಹೀಗಾಗಿ ಯಾವುದೇ ಕಾರಣಕ್ಕೂ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಬಾರದು. ಭೌಗೋಳಿಕ ಆಧಾರದಲ್ಲಿಯೇ ಕ್ಷೇತ್ರ ಮರುವಿಂಗಡಣೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಈ ಬಗ್ಗೆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ದನಿ ಎತ್ತಬೇಕು. ದಕ್ಷಿಣ ಭಾರತದಲ್ಲಿ ಈಗಿರುವ ಒಂದು ಕ್ಷೇತ್ರಗಳು ಕಡಿಮೆಯಾಗಬಾರದು. ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ಉಮೇಶ್ ಉಪಸ್ಥಿತರಿದ್ದರು.
Lok Sabha constituencies should not be redistributed on the basis of population.
Leave a comment