ಚಿಕ್ಕಮಗಳೂರು : ಕನ್ನಡ ರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜದ ಜೊತೆಗೆ ಕನ್ನಡ ಧ್ವಜವನ್ನು ಜಿಲ್ಲಾಡಳಿತ ಹಾರಿಸಬೇಕು ತಪ್ಪಿದಲ್ಲಿ ಕನ್ನಡ ಸೇನೆ ವತಿಯಿಂದ ಅದೇ ಸಮಯದಲ್ಲಿ ಕನ್ನಡ ಧ್ವಜವನ್ನು ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಹಾರಿಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ ರಾಜೇಗೌಡ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜದ ಜೊತೆಗೆ ನಾಡ ಧ್ವಜವನ್ನು ಹಾರಿಸುವಂತೆ ಆದೇಶ ಹೊರಡಿಸಬೇಕು ಎಂದು ಕನ್ನಡ ಸೇನೆ ಒತ್ತಾಯಿಸಿದೆ. ಇಲ್ಲದಿದ್ದರೆ ನಾವೇ ಕನ್ನಡ ಧ್ವಜವನ್ನು ಹಾರಿಸುತ್ತೇವೆ ಎಂದಿರುವ ಸಂಘಟನೆ ವರ್ತಕರು ನಾಮಫಲಕ ಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಬಳಸುವಂತೆ ಆದೇಶವಿದ್ದರೂ ಅನುಸರಿಸುತ್ತಿಲ್ಲ ಎಂದಿರುವ ಅವರು ಕನ್ನಡ ರಾಜ್ಯೋತ್ಸವ ದಿನಾಚರಣೆ ವೇಳೆ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿಗೆ ಯಾವುದೇ ನಿರ್ಬಂಧ ಹೇರಬಾರದು ಹಾಗೂ 70 ಆಟೋ ನಿಲ್ದಾಣಗಳಿಗೆ ಕನ್ನಡ ಬಾವುಟ ಉಚಿತವಾಗಿ ಜಿಲ್ಲಾಡಳಿತ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿರುವ ಕನ್ನಡ ಸೇನೆ ಮುಖಂಡರು ರಾಜ್ಯೋತ್ಸವ ದಿನಾಚರಣೆ ವೇಳೆ ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಜನಪರ ಹೋರಾಟಗಾರರಿಗೆ ಕಾರ್ಯಕ್ರಮದ ವೇಳೆ ವಿಶೇಷ ಆಸನಗಳ ವ್ಯವಸ್ಥೆ ಮಾಡಿ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.
Leave a comment