ಚಿಕ್ಕಮಗಳೂರು: ಸಾಲಗಾರ ಸಾವಿಗೀಡಾದ ಪ್ರಕರಣದಲ್ಲಿ ವಿಮಾ ಮೊತ್ತವನ್ನು ನೀಡದೆ ಸೇವಾ ನ್ಯೂನತೆ ಎಸಗಿರುವ ಆರೋಪದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪಿಎನ್‌ಬಿ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಬೆಂಗಳೂರು ಹಾಗೂ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಮಂಗಳೂರು ಕಚೇರಿಗಳ ವ್ಯವಸ್ಥಾಪಕರು ಸಾಲದ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿದೆ.
ಮೂಡಿಗೆರೆ ತಾಲ್ಲೂಕು ಜೋಗಣ್ಣನಕೆರೆ ಜೇನುಬೈಲಿನ ಲೀನಾ ಫರ್ನಾಂಡಿಸ್ ಹಾಗೂ ಫ್ರಾನ್ಸಿಸ್ ಫರ್ನಾಂಡಿಸ್ ಅವರ ಮಗ ಚಿಕ್ಕಮಗಳೂರಿನ ಮುತ್ತೂಟ್ ಫಿನ್‌ಕಾರ್ಪ್ ಲಿಮಿಟೆಡ್ ಹಾಗೂ ಕೇರಳದ ತ್ರಿವೇಂಡ್ರಮ್‌ನ ಮುತ್ತೂಟ್ ಫಿನ್‌ಕಾರ್ಪ್ ಲಿಮಿಟೆಡ್(ಸೆಕ್ಯೂರ್‍ಡ್ ಮತ್ತು ಅನ್‌ಸೆಕ್ಯೂರ್‍ಡ್ ಲೆಂಡಿಂಗ್ ಬಿಸಿನೆಸ್ ವಿಭಾಗ) ಸಂಸ್ಥೆಯ ವ್ಯವಸ್ಥಾಪಕರುಗಳ ಮೂಲಕ ಸಾಲ ಪಡೆದಿದ್ದರೆನ್ನಲಾಗಿದೆ. ಈ ಸಾಲದ ಸಂಬಂಧ ಪಿಎನ್‌ಬಿ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಬೆಂಗಳೂರು ಹಾಗೂ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಮಂಗಳೂರು ಕಚೇರಿ ವ್ಯವಸ್ಥಾಪಕರುಗಳ ಮೂಲಕ ವಿಮೆ ಪಡೆದುಕೊಂಡಿದ್ದರು.
ಅನಂತರದಲ್ಲಿ ಲೀನಾ ಫರ್ನಾಂಡಿಸ್ ಹಾಗೂ ಫ್ರಾನ್ಸಿಸ್ ಫರ್ನಾಂಡಿಸ್ ಅವರ ಮಗ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ವಿಮಾ ಪಾಲಿಸಿಯ ಪ್ರಕಾರ ಸಾಲದ ಮೊತ್ತವನ್ನು ಪಿಎನ್‌ಬಿ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಬೆಂಗಳೂರು ಹಾಗೂ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಮಂಗಳೂರು ಕಚೇರಿಗಳು ಪಾವತಿಸಬೇಕಾಗಿತ್ತು. ಆದರೆ ಈ ಸಾಲದ ಮೊತ್ತವನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿದ್ದಲ್ಲದೆ, ಅನುಚಿತ ವ್ಯಾಪಾರಿ ನೀತಿ ಅನುಸರಿಸಿರುವುದಾಗಿ ಕಳೆದ ಫೆಬ್ರವರಿ ೨ ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಮುತ್ತೂಟ್ ಸಂಸ್ಥೆಯ ಕಚೇರಿಗಳ ವಿರುದ್ಧದ ದೂರುಗಳನ್ನು ವಜಾಗೊಳಿಸಿ, ಪಿಎನ್‌ಬಿ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಬೆಂಗಳೂರು ಹಾಗೂ ಮೆಟ್‌ಲೈಫ್ ಇಶ್ಯೂರೆನ್ಸ್ ಕಂಪನಿಯ ಮಂಗಳೂರು ಕಚೇರಿ ವ್ಯವಸ್ಥಾಪಕರುಗಳೇ ಈ ಸಾಲದ ಮೊತ್ತವನ್ನು ಪಾವತಿಸುವಂತೆ ತೀರ್ಪು ನೀಡಿದೆಯಲ್ಲದೆ, ಪರಿಹಾರವಾಗಿ ೩೦ ಸಾವಿರ ರೂ. ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ೧೦ ಸಾವಿರ ರೂ.ಗಳನ್ನು ದೂರುದಾರರಿಗೆ ನೀಡುವಂತೆ ಆದೇಶ ನೀಡಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಬಮ್ಮನಕಟ್ಟಿ ಇವರುಗಳು ಗ್ರಾಹಕರ ಹಿತರಕ್ಷಣೆಗೆ ಪೂರಕವಾಗಿ ಈ ತೀರ್ಪು ನೀಡಿದ್ದಾರೆ. ದೂರುದಾರರ ಪರವಾಗಿ ವಕೀಲರಾದ ಹೆಚ್.ಮೋಹನ್ ಅವರು ವಾದ ಮಂಡಿಸಿದ್ದರು.
Insurance company ordered to repay outstanding loan
Leave a comment