ಚಿಕ್ಕಮಗಳೂರು : ಜಿಲ್ಲೆಯ ಕಾಡಂಚಿನ ಕುಗ್ರಾಮಗಳಿಗೆ ಭೇಟಿ ನೀಡಿ ಎಸ್ಕೇಪ್ ಆಗಿದ್ದ ನಕ್ಸಲರಿಗಾಗಿ ಇದೀಗ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗಳು ಕೂಂಬಿಂಗ್ ಚುರುಕುಗೊಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಗಡಿ ಗ್ರಾಮಗಳಲ್ಲಿ ಕೂಂಬಿಂಗ್ ಚುರುಕುಗೊಂಡಿದ್ರೆ, ಅಂತರ್ ಜಿಲ್ಲಾ ಗಡಿಯಲ್ಲಿ ವಾಹನ ತಪಾಸಣೆ ಕೂಡ ಹೆಚ್ಚಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಆಗುಂಬೆ ಘಾಟಿ, ಕಳಸ ತಾಲೂಕಿನ ಕುದುರೆಮುಖ ಮಾರ್ಗ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಸುತ್ತಮುತ್ತ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಮಾರ್ಗದಲ್ಲಿ ಓಡಾಡುವ ಪ್ರತಿಯೊಂದು ವಾಹನಗಳನ್ನೂ ಚೆಕ್ ಮಾಡಿ ಬಿಡುತ್ತಿದ್ದಾರೆ. ಕೊಪ್ಪ ತಾಲೂಕಿನ ಕಾಡಂಚಿನ ಕುಗ್ರಾಮ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬುವರ ಮನೆಗೆ ಭೇಟಿ ನೀಡಿ ಹೋದ ಪರಿಣಾಮ ಅವರು ಹೋದ ಮಾರ್ಗದಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೂಡ್ಲಿ ಗ್ರಾಮದಲ್ಲಿ ಆರು ಜನ ಅಪರಿಚಿತರು ಓಡಾಡಿದ್ದರು ಎಂಬ ಮಾಹಿತಿ ಹಿನ್ನೆಲೆ ಆ ಭಾಗದಲ್ಲೂ ಕೂಂಬಿಂಗ್ ಹೆಚ್ಚಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಡಿ ಹಂಚಿಕೊಂಡಿರೋ ಮೂರು ತಾಲೂಕಿನ ಗಡಿಯಲ್ಲೂ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ ಕೈಗೊಂಡಿದ್ದಾರೆ.
Leave a comment