ಚಿಕ್ಕಮಗಳೂರು : ಅರಣ್ಯ ಸಮಸ್ಯೆಗಳನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಅಜೆಂಡಾ ವಿಷಯವಾಗಿ ಪರಿಗಣಿಸದಿದ್ದರೆ ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ ಘೇರಾವ್ ಹಾಕಲಾಗುವುದು ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್ ವಿಜಯ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಗಾಂಧಿ ಪ್ರತಿಮೆ ಬಳಿ ಅರಣ್ಯ ಸಮಸ್ಯೆಗಳಾದ ಡಿಮ್ಡ್ ಫಾರೆಸ್ಟ್, ಸೊಪ್ಪಿನ ಬೆಟ್ಟ ಸೆಕ್ಷನ್ 4(1), ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗೆ ವಿವಿಧ,ರೈತ ಸಂಘ, ಪ್ರಗತಿಪರ ಸಂಘಟನೆಗಳು ಕೈಜೋಡಿಸಿವೆ. ಇದೆ ವೇಳೆ ಮಾತನಾಡಿದ ವಿಜಯ್ ಕುಮಾರ್, ಅರಣ್ಯ ಸಚಿವರು ತಮ್ಮ ಹೇಳಿಕೆಯಲ್ಲಿ ಸುಮಾರು 16,114 ಚದುರ ಕಿಲೋಮೀಟರ್ ಪ್ರದೇಶವನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ತಂದು ಅರಣ್ಯ ರಕ್ಷಣೆ ಮಾಡಲಾಗುವುದು ಮತ್ತು ಇದರಲ್ಲಿ ಸುಮಾರು 1500 ಹಳ್ಳಿಗಳು ಬರುತ್ತದೆ, ಇದಕ್ಕೆ ಕೇಂದ್ರದಿಂದ ಪರಿಹಾರದ ಪ್ಯಾಕೇಜ್ ಹೇಳಲಾಗುವುದು ಎಂದಿದ್ದಾರೆ. ಆದರೆ ಈ ಭೂ ಪ್ರದೇಶವನ್ನು ಭೌತಿಕ ಸರ್ವೆ ಮಾಡಿ ಹಳ್ಳಿಗಳ ಗಡಿ ಗುರುತಿಸಿ ಅಧಿಕೃತ ಅರಣ್ಯ ವ್ಯಾಪ್ತಿಯ ಮಾತ್ರ ಸೇರಿಸಿ, ಜನರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕೆಂದು ಎಂದರು.
ಜನಾಭಿಪ್ರಾಯವನ್ನು ಸಂಗ್ರಹಿಸಿದ ನಂತರ ಯೋಜನೆಯ ವ್ಯಾಪ್ತಿಯನ್ನು ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸುಮಾರು 23,500 ಎಕರೆ ಹೆಚ್ಚು ಪ್ರದೇಶವನ್ನು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆ ಮಾಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದ್ದು, ಈ ವಿಚಾರವನ್ನು ಸ್ಥಳೀಯ ಗ್ರಾಮಸ್ಥರಿಂದ ಮುಚ್ಚಿಟ್ಟು ಯೋಜನೆ ಜಾರಿಗೆಗೊಳಿಸಲು ಮುಂದಾಗಿರುವುದು ದುರಂತ. ಹೀಗಿರುವ ಅರಣ್ಯ ಕಾನೂನುಗಳನ್ನು ಸಮರ್ಪಕವಾಗಿ ಬಳಸಿ ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಮತ್ತು ಪಶ್ಚಿಮಘಟ್ಟ ರಕ್ಷಣೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಅಭಿವೃದ್ಧಿಗೆ ಮಾರಕವಾಗಿರುವ ಡಿಮ್ಡ್ ಫಾರೆಸ್ಟ್ ಸಮಸ್ಯೆಗಳನ್ನು ಕೂಲಂಕುಶವಾಗಿ ಮುಂಬರುವ ಅಧಿವೇಶನದಲ್ಲಿ ಅಜೆಂಡ ರೀತಿಯಲ್ಲಿ ಚರ್ಚೆ ರೂಪಿಸಿ ರೈತರ ಸಮಸ್ಯೆಗಳ ನಿವಾರಣೆಗೆ ಪ್ರಮುಖ ವಿಷಯವನ್ನಾಗಿಸಿ ಎಂದರು.
Leave a comment