ಚಿಕ್ಕಮಗಳೂರು : ಜಿಲ್ಲೆಯಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗುತ್ತಿದ್ದು, ಜಿಲ್ಲೆಯ ಹಳ್ಳ ಕೊಳ್ಳ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯಲಾರಂಭಿಸಿವೆ.
ಗುಮ್ಮನಂತೆ ಕಾದು ಕುಳಿತು ದಿಢೀರನೆ ಒಂದೇ ಸಮನೆ ಭಯಂಕರವಾದ ಗುಡುಗು ಸಿಡಿಲಿನ ಆರ್ಭಟದೊಂದಿಗೆ ರೌದ್ರನರ್ತನದಂತೆ ಗಂಟೆಗೆ ಮೂರರಿಂದ ನಾಲ್ಕು ಐದು ಇಂಚು ಮಳೆ ಧಾರಾಕಾರವಾಗಿ ಮಲೆನಾಡಿನಲ್ಲಿ ಸುರಿಯುತ್ತಿರುವ ವರದಿಯಾಗಿದೆ.
ಈ ಪರಿಣಾಮ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಈಗಾಗಲೇ ಅಲ್ಲಲ್ಲಿ ಕಾಫಿ ಕೊಯ್ಲು ಆರಂಭವಾಗಿ ಕಾಫಿ ಹಣ್ಣು ಗಿಡದಲ್ಲಿ ಕಾಣಿಸಿಕೊಳ್ಳತೊಡಗುತ್ತಿದೆ. ಕಾಫಿ ಬೆಳಗಾರರ ಅತ್ಯಂತ ಸಂಕಷ್ಟದ ಸಮಯದಲ್ಲಿ ಕಾಫಿ ಬೆಳಗಾರರನ್ನು ಕೈ ಹಿಡಿದು ಮೇಲೆತ್ತಿದ, ಬ್ಲಾಕ್ ಗೋಲ್ಡ್ ಎಂದು ಕರೆಸಿಕೊಂಡ ಕಾಳು ಮೆಣಸಿನ ಬಳ್ಳಿಗಳು ಕೂಡ ಕಾಫಿ ತೋಟದ ಮಧ್ಯೆ ಉಪ ಬೆಳೆಗಳಾಗಿ ಬೆಳಗಾರರನ್ನು ಸಾಕುತ್ತಿವೆ. ಈ ಕಾಳು ಮೆಣಸಿನ ಜೊತೆಗೆ ಅಡಿಕೆ ಬೆಳೆಯು ಕೂಡ ಕಾಫಿ ತೋಟಗಳ ಮಧ್ಯೆಇದೆ, ಈ ಎಲ್ಲ ಬೆಳೆಗಳಿಗೂ ಅತಿಯಾದ ಮಳೆಯು ಸುರಿಯುತ್ತಿರುವ ಕಾರಣ, ಕೊಳೆ ರೋಗ ಆರಂಭವಾಗಿ, ಬೆಳೆಗಾರನ ಅಂಗೈಗೆ ಬರಬೇಕಾದ ಆದಾಯ ಪಂಗನಾಮ ಹಾಕಿದಂತೆ ಆಗಿದೆ. ಈ ಮಧ್ಯೆ ಸಾಲ ಕೊಟ್ಟ ಬ್ಯಾಂಕುಗಳು ಕೊಡ ವಸೂಲಿಗಾಗಿ ಬೆಳಗಾರನ ಬೆನ್ನತ್ತುತ್ತಿವೆ, ತೋಟದ ಹೆಸರಿನಲ್ಲಿ ಸಾಲ ಪಡೆದ ಸುಸ್ತಿಯಾದ ಬೆಳೆಗಾರರ ತೋಟವನ್ನು ಆನ್ಲೈನ್ ಮೂಲಕ ಪ್ರಕಟಣೆ ಹೊರಡಿಸಿ ಹರಾಜು ಹಾಕಲು ಹೊರಟಿವೆ.
ಬೆಂಕಿಯಿಂದ ಎತ್ತಿ ಬಾಣಲಿಗೆ ಹಾಕಿದಂತೆ ಆಗಿದೆ ಬೆಳಗಾರನ ಪರಿಸ್ಥಿತಿ.ಪ್ರಾರಂಭದ ದಿನಗಳಲ್ಲಿ ಮಲೆನಾಡಿಗೆ ಒಳ್ಳೆಯ ಮುಂಗಾರು ಆಗಮನವಾಗದೆ ಇದ್ದ ಕಾರಣ,ಕಾಳು ಮೆಣಸಿನ ಉತ್ಪಾದನೆಯು ಈ ಬಾರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ,ಅಲ್ಲದೆ ಹವಮಾನ ವೈಪರಿತ್ಯದಿಂದಾಗಿ ಉಷ್ಣಾಂಶದಲ್ಲಿ ಏರುಪೇರಾಗಿ ಕಾಳು ಮೆಣಸಿನ ಬಳ್ಳಿಗಳು ಈಗಾಗಲೇ ಹಳದಿ ರೋಗಕ್ಕೆ ಹೆಚ್ಚಿನ ಮಟ್ಟದಲ್ಲಿ ತುತ್ತಾಗಿವೆ. ನಿನ್ನೆ ಹೊಡೆದ ಚಿತ್ತೆ ಮಳೆಯ ರಭಸಕ್ಕೆ ಈಗಾಗಲೇ ಅಲ್ಲಲ್ಲಿ ಹಣ್ಣಾಗಿದ್ದ ಕಾಫಿ ಹಣ್ಣು ನೆಲಕ್ಕೆ ಉದುರಿದೆ, ಹಣ್ಣು ಮಾತ್ರವಲ್ಲ ಕಾಫಿ ಕಾಯಿಯು ಉದುರುವಂತಹ ರಭಸದ ಮಳೆ ಧರೆಗೆ ಸುರಿದಿದೆ.
ರಬಸದ ಮಳೆಗೆ ಮೇಲ್ಮಣ್ಣು ಕೊಚ್ಚಿ ಹೋದ ಕಾರಣ,ಇಳಿಜಾರು ಪ್ರದೇಶದಲ್ಲಿರುವ ಕಾಫಿ ತೋಟಗಳ ಕಾಫಿ ಗಿಡ ಮತ್ತು ಮೆಣಸಿನ ಬಳ್ಳಿಗಳ ಬೇರುಗಳು ಅಸ್ತಿಪಂಜರದಂತೆ ಬೆಳ್ಳಗೆ ತೋಟಗಳ ಮಧ್ಯೆ ಕಾಣಲಾರಂಬಿಸಿದೆ.
ಬೆಳಗಾರರು ಅಧಿಕ ರಾಸಾಯನಿಕ ಗೊಬ್ಬರವನ್ನು ಪ್ರಯೋಗಿಸುತ್ತಿರುವ ಕಾರಣ,ಮಣ್ಣಿನ ಮೇಲ್ಮೈ ಫಲವತ್ತತೆ ಕಡಿಮೆಯಾಗಿ, ಸಾವಯವ ಇಂಗಾಲ ಇಳಿಮುಖವಾದ ಕಾರಣ, ನೀರನ್ನು ಸರಿಯಾಗಿ ಕುಡಿಯುವುದಕ್ಕೂ ಆಗದೆ, ತನ್ನಲ್ಲಿ ಹಿಡಿದಿಟ್ಟುಕೊಳ್ಳುವುದಕ್ಕೂ ಆಗದೆ ಮಣ್ಣು ಶಕ್ತಿ ಕಳೆದುಕೊಂಡ ಕಾರಣ, ಬಿದ್ದ ಮಳೆಯ ನೀರೆಲ್ಲ ರಭಸದಿಂದ ಓಡಲಾರಂಭಿಸಿದೆ. ಅಲ್ಲಲ್ಲಿ ಕೆಲವು ಕಡೆ ಮಳೆ ಕಡಿಮೆ ಬಿದ್ದರೂ ಕೂಡ, ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳಲು ಆಗದೆ ಇದ್ದ ಕಾರಣ ಹೆಚ್ಚಿನ ಪ್ರವಾಹ ಆಗುತ್ತಿದೆ. ಮಲೆನಾಡಿನಲ್ಲಿ ಭತ್ತ ಬೆಳೆಯುವ ಗದ್ದೆಗಳೆಲ್ಲ ಮಾಯವಾದ ಕಾರಣ ನಡೆಯುವ ನೀರು ಓಡಲಾರಂಭಿಸಿದೆ.
ಇದು ಅಕ್ಟೋಬರ್ ಮಾಸ, ಈ ತಿಂಗಳಲ್ಲಿ ಕಾಫಿ ಗಿಡಗಳ ಕಾಂಡಕೋರಕ ರೋಗಕ್ಕೆ ಔಷಧಿ ಹಚ್ಚುವ ಸಮಯ, ಹವಮಾನ ತಂಪಾಗಿರುವುದರಿಂದ, ಕಾಫಿ ಗಿಡಗಳ ಕಾಂಡವನ್ನು ಕೊರೆಯುವ ಕಾಂಡ ಕೊರಕ ಹುಳುಗಳು ಹಾರಾಟ ಮಾಡುವ ಸಾಧ್ಯತೆ ಕಡಿಮೆ ಇದ್ದು, ಕಾಫಿ ಗಿಡದ ಕಾಂಡ ಕೊರಕ ಬಾದೆವು ಕಡಿಮೆಯಾಗಿ ಬೆಳಗಾರರಿಗೆ ಸ್ವಲ್ಪ ಅನುಕೂಲವಾಗಬಹುದು.ಆದರೆ, ಮಳೆ ಇದೇ ರೀತಿ ಆರ್ಭಟಿಸುತ್ತಿದ್ದರೆ , ಮುಂದುವರೆದು ನವೆಂಬರ್ ತಿಂಗಳಲ್ಲಿಯೂ ಇದೆ ರೀತಿ ಸುರಿಯಲಾರಂಭಿಸಿದರೆ, ಈ ನವಂಬರ್ ತಿಂಗಳ ಮಳೆಯ ನೇರ ಪ್ರಭಾವ ಕಾಫಿ ಗಿಡದ ಮೇಲೆ ಅತ್ಯಂತ ದುಷ್ಪರಿಣಾಮ ಬೀರುತ್ತದೆ. ಕಾರಣ ನವೆಂಬರ್ ತಿಂಗಳಲ್ಲಿ ಚಳಿ ಬೀಳುತ್ತದೆ, ಚಳಿ ಬಿದ್ದ ಮೇಲೆ ಮಳೆ ಮುಂದುವರೆದರೆ ಇದರ ದುಷ್ಪರಿಣಾಮ ದುಪ್ಪಟ್ಟು ಆಗುತ್ತದೆ.
ಸಾವಿರಾರು ಸಂಖ್ಯೆಯ ಕಾಫಿ ಬೆಳೆಗಾರರು, ಲಕ್ಷಾಂತರ ಸಂಖ್ಯೆಯ ಕೂಲಿಕಾರ್ಮಿಕರು, ಕಾಫಿ ವ್ಯಾಪಾರಿಗಳಿಗೆ ಜೀವನವನ್ನು ಕಟ್ಟಿಕೊಟ್ಟಿರುವುದು ಕಾಫಿ ತೋಟಗಳು. ಅಲ್ಲದೆ ವಿದೇಶಿ ವಿನಿಮಯದಿಂದ ದೇಶಕ್ಕೆ ದೊಡ್ಡಮಟ್ಟದ ಆದಾಯ ಸಹ ತಂದುಕೊಡುತ್ತಿದೆ.ಇಂತಹ ಕಾಫಿ ತೋಟಗಳ ಮಾಲೀಕ ಮತ್ತು ಕಾರ್ಮಿಕರ ಜೀವನ ಅತಂತ್ರವಾಗದಂತೆ ಪ್ರಕೃತಿಯೇ ಕಾಪಾಡಬೇಕಾಗಿದೆ. ಆಳುವ ಸರ್ಕಾರಗಳು ಚಿಂತನೆ ಮಾಡಬೇಕಾಗಿದೆ. ಕಾಫಿ ಬೆಳೆಗಾರ ನಾನು ತಪ್ಪಿದೆಲ್ಲಿ ಎಂಬುದನ್ನು ಅರಿಯಬೇಕಾಗಿದೆ.
•••••••••••••••••••••••✒️
ವರದಿ :
ಡಿ.ಎಂ.ಮಂಜುನಾಥಸ್ವಾಮಿ
Leave a comment