ಚಿಕ್ಕಮಗಳೂರು: ಮದುವೆ ಮನೆಗೆ ಹೋಗುತ್ತಿದ್ದ ಅಕ್ಕಸಾಲಿಗನ ಕಾರು ಆಯತಪ್ಪಿ ಕೆರೆಯಲ್ಲಿ ಮುಳುಗಿತ್ತು. ಅದೃಷ್ಟವಶಾತ್ ಅಕ್ಕಸಾಲಿಗ ಬದುಕುಳಿದ. ಕಾರನ್ನೂ ಮೇಲಕ್ಕೆ ತರಲಾಯಿತು. ಆದರೆ…. ಮದುವೆ ಮನೆಗೆ ಕೊಂಡೊಯ್ಯುತ್ತಿದ್ದ ಚಿನ್ನಾಭರಣ ಇದ್ದ ಬ್ಯಾಗು ನೀರಲ್ಲಿ ಮುಳುಗಿತ್ತು.
ಯೂಟ್ಯೂಬ್ ನಲ್ಲಿ ಎಂದೋ ನೋಡಿದ್ದ ನೆನಪು. ತಕ್ಷಣಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ನೆನಪಾಯಿತು. ಕರೆ ಬಂದದ್ದೇ ತಡ, ಈಶ್ವರ್ ತಂಡ ಇತ್ತ ಪಯಣಿಸಿತು. ಕೆರೆಗೆ ಇಳಿದು ಗಂಟೆಗಟ್ಟಲೆ ಶೋಧಿಸಿದಾಗ ಬ್ಯಾಗು ಸಿಕ್ಕಿತು.
ಸಾರ್ವಜನಿಕರು ಪೊಲೀಸರ ಸಮ್ಮುಖದಲ್ಲಿ ಬ್ಯಾಗು ತೆರೆದಾಗ ಸಿಕ್ಕಿದ್ದು ಬರೋಬರಿ ೨೦ ಲಕ್ಷ ರೂ ಬೆಲೆಯ ಚಿನ್ನಾಭರಣ. !!
ಇದು ನಡೆದದ್ದು ಇಲ್ಲಿಗೆ ಸಮೀಪದ ಮಾಗಡಿ ಕೆರೆಯಲ್ಲಿ. ಮಲೆಬೆನ್ನೂರಿನ ಸದಾನಂದ ಮದುವೆಯ ಆಭರಣವನ್ನು ಕೊಡಲು ಬೇಲೂರಿಗೆ ಹೋಗುತ್ತಿದ್ದಾಗ ಬ್ರೇಕ್ ವೈಫಲ್ಯದಿಂದ ಆಯತಪ್ಪಿ ಕಾರು ಕೆರೆಗೆ ಉರುಳಿತ್ತು. ಹೇಗೋ ಕಾರಿನಿಂದ ಹೊರಬಂದರೂ, ಜೊತೆಗೆ ಬ್ಯಾಗ್ ತರಲು ಆಗಿರಲಿಲ್ಲ.
ಈ ಕೌತುಕ ಕಾರ್ಯಾಚರಣೆ ವೇಳೆ ಕೆರೆ ದಡದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಸ್ಥಳಕ್ಕೆ ಪೊಲೀಸರೂ ಆಗಮಿಸಿದ್ದರು. ಬ್ಯಾಗ್ ಸಿಕ್ಕಿದೊಡನೆ ಪೊಲೀಸರ ಸಮ್ಮುಖದಲ್ಲಿ ಈಶ್ವರ್ ಮಲ್ಪೆ, ವಾರಸುದಾರರಿಗೆ ಒಪ್ಪಿಸಿದರು.
Gold ornaments worth Rs 20 lakh found in Magadi Lake
Leave a comment