ಚಿಕ್ಕಮಗಳೂರು: ಸೆಕ್ಷನ್ ೪(೧) ಮೀಸಲು ಅರಣ್ಯ ಘೋಷಣೆಯಾಗಿರುವ ಬ್ಲಾಕ್‌ಗಳಿಗೆ ಸೆಟಲ್‌ಮೆಂಟ್ ಮಾಡಲು ನಿಯೋಜಿಸಿರುವ ಅರಣ್ಯ ವ್ಯವಸ್ಥಾಪಕರು ರೈತರ ಪರವಾಗಿರದೆ ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಅವರ ವಿರುದ್ಧ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್. ವಿಜಯ್‌ಕುಮಾರ್ ಎಚ್ಚರಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆಕ್ಷನ್ ೪(೧) ಮೀಸಲು ಅರಣ್ಯ ಸಮಸ್ಯೆ ಬಗ್ಗೆ ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳು, ಎಫ್‌ಎಸ್‌ಒ ಸೇರಿದಂತೆ ಅರಣ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ ಎಂದರು.
ರೈತರು ಮನೆ ಕಟ್ಟಿಕೊಂಡು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಎ ಎಂದು ವರ್ಗೀಕರಿಸಿ, ರೈತರು ಸಾಗುವಳಿ ಮಾಡದೆ ಖಾಲಿ ಇರುವ ಭೂಮಿಯನ್ನ ಬಿ ಎಂದು ವರ್ಗೀಕರಿಸಿ ರೈತರಿಲ್ಲದ ಬಿ ವರ್ಗೀಕರಣದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಿ, ಎ ವರ್ಗೀಕರಣದ ಭೂಮಿಯನ್ನು ಸರಕಾರ ತೀರ್ಮಾನ ತೆಗೆದು ಕೊಳ್ಳುವವರೆಗೂ ಅದನ್ನು ಹಾಗೇ ಉಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿಸಿದರು.
ಆದರೆ, ಇಲಿನ ಎಫ್‌ಎಸ್‌ಒ ಅವರು ಈ ತೀರ್ಮಾನವನ್ನು ಧಿಕ್ಕರಿಸಿ ಯಥಾವತ್ತಾಗಿ ರೈತರ ಜಮೀನಿಗೆ ಭೇಟಿ ನೀಡದೆ ಸ್ಕೆಚ್ ತಯಾರಿ ಮಾಡದೆ ನ್ಯಾಯಾಲಯದ ನಿಯಮಾವಳಿಗಳನ್ನು ಪಾಲಿಸದೆ ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇವರ ಧೋರಣೆ ಇದೇ ರೀತಿ ಮುಂದುವರಿದರೆ ಅವರ ವಿರುದ್ಧ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಮೂನೆ ೫೦-೫೩ ರಲ್ಲಿ ಮಂಜೂರಾಗಿದ್ದ ಭೂಮಿಯನ್ನು ಅಕ್ರಮ ಎಂದು ಪರಿಗಣಿಸಿ ರದ್ದುಪಡಿಸಿದ್ದು, ಕೂಡಲೇ ಇದನ್ನು ಪುನರ್‌ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ನಿಯಮಾವಳಿಗೆ ತಿದ್ದುಪಡಿ ಮಾಡಿ ನಮೂನೆ ೫೭ ರಲ್ಲಿ ಪ್ಲಾಂಟೇಶನ್ ಬೆಳೆಗಳಿಗೂ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರಲ್ಲಿ ಒತ್ತಾಯ ಮಾಡಬೇಕು ಎಂದು ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಕೆ.ಕೆ. ರಘು, ಮುಖಂಡರುಗಳಾದ ವಾಸುಪೂಜಾರಿ, ಪೂರ್ಣೇಶ್, ಈಶ್ವರ್, ರವಿಕುಮಾರ್, ಚಂದ್ರೇಗೌಡ, ಕುಮಾರಸ್ವಾಮಿ ಉಪಸ್ಥಿತರಿದ್ದರು.
Go back movement against the forest department
Leave a comment