ಚಿಕ್ಕಮಗಳೂರು: ‘ಒಂದಾಗಿ ಬಾಳಿದರೆ ಎಲ್ಲೆಡೆ ಶಾಂತಿ ಮತ್ತು ಸೌಹಾರ್ದ ನೆಲೆಸಲಿದೆ. ಸೌಹಾರ್ದ ನಡಿಗೆ ಮೂಲಕ ಶಾಂತಿಯ ಸಂದೇಶ ಸಾರಿರುವುದು ಉತ್ತಮವಾದ ಕೆಲಸ’ ಎಂದು ಬಸವ ಮಠದ ಜಯ ಬಸವನಾಂದಸ್ವಾಮೀಜಿ ಹೇಳಿದರು.
ಸುನ್ನಿ ಸ್ಟೂಡೆಂಟ್ ಫೆಡರೇಷನ್(ಎಸ್ಎಸ್ಎಫ್) ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸೌಹಾರ್ದ ನಡಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕರಾವಳಿಯಲ್ಲಿ ಸೌಹಾರ್ದ ಹಾಳಾಗುತ್ತಿದೆ. ಇಡೀ ಪ್ರಪಂಚದಲ್ಲಿ ಯುದ್ಧದ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ಒಂದಾಗಿ ಬಾಳುವ ಸಂದೇಶಗಳು ಹೆಚ್ಚು ಹೆಚ್ಚಾಗಿ ಹರಡ ಬೇಕಿದೆ. ಈ ರೀತಿಯ ಕಾರ್ಯ ಕ್ರಮವನ್ನು ಎಲ್ಲಾ ಧರ್ಮಗಳು ಆಯೋಜಿಸಿದರೆ ಎಲ್ಲೆಡೆ ಶಾಂತಿ ನೆಲೆಸಲಿದೆ ಎಂದರು.
ಕಥೋಲಿಕ್ ಚರ್ಚ್‌ನ ಫಾದರ್ ಆರ್.ಶಾಂತರಾಜ್ ಮಾತನಾಡಿ, ‘ಎಲ್ಲಾ ಧರ್ಮಗಳು ಶಾಂತಿಯನ್ನೇ ಬಯಸುತ್ತಿವೆ. ಧರ್ಮಗ್ರಂಥಗಳ ಮೂಲಕ ಅದನ್ನೇ ಬೋಧಿಸುತ್ತಿವೆ. ಮನುಷ್ಯ ಪರಸ್ಪರ ಪ್ರೀತಿ–ವಿಶ್ವಾಸ ಬೆಳಸಿಕೊಂಡರೆ ಎಲ್ಲೆಡೆ ಶಾಂತಿ ನೆಲೆಸುತ್ತದೆ’ ಎಂದು ಹೇಳಿದರು.
ಎಸ್‌ಎಸ್‌ಎಫ್ ರಾಜ್ಯ ಘಟಕದ ಅಧ್ಯಕ್ಷ ಸುಫ್ಯಾನ್ ಸಖಾಫಿ ಮಾತನಾಡಿ, ‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ದ್ವೇಷ ಭಾಷಣ ಗಳು ವ್ಯಾಪಕವಾಗಿದ್ದು, ಧರ್ಮ-ಜಾತಿಗಳ ನಡುವೆ ವಿಷಬೀಜ ಬಿತ್ತಲಾಗುತ್ತಿದೆ. ಇದರಿಂದ ಮನುಷ್ಯ–ಮನುಷ್ಯನ ನಡುವೆ ದ್ವೇಷ ಹೆಚ್ಚುತ್ತಿದೆ’ ಎಂದರು.
‘ಪ್ರಪಂಚದಲ್ಲೇ ಶ್ರೇಷ್ಠವಾದ ಸಂವಿಧಾನವನ್ನು ನಾವು ಹೊಂದಿದ್ದೇವೆ. ನಮ್ಮ ಸಂವಿಧಾನ. ಅದನ್ನು ಎತ್ತಿ ಹಿಡಿದು ಅಖಂಡ ಭಾರತವನ್ನು ನಾವು ಕಟ್ಟಬೇಕಿದೆ. ಎಲ್ಲರೂ ಕೈ ಹಿಡಿದು ನಡೆದರೆ ದೇಶವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿದೆ’ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಸೌಹಾರ್ದ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರ ಕೈ ಕೈ ಹಿಡಿದು ನಡೆದರು. ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ತನಕ ನೂರಾರು ಜನ ಸೌಹಾರ್ದ ನಡಿಗೆಯಲ್ಲಿ ಪಾಲ್ಗೊಂಡರು. ನಡಿಗೆಯ ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಸರ್ವಧರ್ಮ ಸಮನ್ವಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್, ಭೀಮ್ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇಶ್, ಮುಹಮ್ಮದ್ ಅಲಿ ತುರ್ಕಳಿಕೆ, ಎಪಿಎಸ್ ಅಹ್ದಲ್ ತಂಗಳ್, ಹಾಮಿಮ್ ಶಿಹಾಬ್ ತಂಗಳ್, ಯೂಸುಫ್ ಮದನಿ, ಅಬೂಬಕರ್, ಝಮೀರ್ ಮುಸಬ್ಬಾ, ಶಾಹಿದ್ ರಜ್ವಿ, ನಾಸಿರ್ ಇಂಪಾಲ್, ಉಸ್ಮಾನ್ ಹಂಡುಗುಳಿ ಭಾಗವಹಿಸಿದ್ದರು.
Friendly walk by Sunni Student Federation
Leave a comment