ಚಿಕ್ಕಮಗಳೂರು : ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿ ಹಿನ್ನೆಲೆ ಜಿಲ್ಲಾಡಳಿತ 4 ದಿನಗಳ ಕಾಲ ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ. ಇದೇ ಡಿಸೆಂಬರ್ 11 ರಿಂದ 15ರ ಬೆಳಗ್ಗೆ 10 ಗಂಟೆವರೆಗೆ 4 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ.
ಇದೇ ಡಿಸೆಂಬರ್ 12ನೇ ತಾರೀಖಿನಿಂದ 14ನೇ ತಾರೀಖಿನವರೆಗೆ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ದತ್ತ ಜಯಂತಿಯ ಸಂಭ್ರಮ. ಹಾಗಾಗಿ, ಪ್ರವಾಸಿಗರ ವಾಹನ ಹಾಗೂ ದತ್ತ ಮಾಲಾಧಾರಿಗಳ ವಾಹನದಿಂದ ಟ್ರಾಫಿಕ್ ಜಾಮ್ ಆಗಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮುಳ್ಳಯ್ಯನಗಿರಿ ಭಾಗಕ್ಕೆ 4 ದಿನಗಳ ಕಾಲ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧ ಏರಿದೆ. ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗದ ರಸ್ತೆ ಅತ್ಯಂತ ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಬಾರದು ಜೊತೆಗೆ ಭದ್ರತೆಯ ದೃಷ್ಠಿಯಿಂದಲೂ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಡಿ.12ರಂದು ಸಾವಿರಾರು ಮಹಿಳೆಯರು ಅನುಸೂಯ ಜಯಂತಿ ಅಂಗವಾಗಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಬಳಿಕ ದತ್ತಪೀಠಕ್ಕೆ ತೆರಳಿ ಅನುಸೂಯ ಜಯಂತಿಯ ಅಂಗವಾಗಿ ಹೋಮ-ಹವನ ನಡೆಸಲಿದ್ದಾರೆ. 13ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಹಾಗೂ ಸಾರ್ವಜನಿಕರು ಸೇರಿ 20ಸಾವಿರಕ್ಕೂ ಅಧಿಕ ಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ.
14ರಂದು ರಾಜ್ಯದ ವಿವಿಧ ಭಾಗಗಳಿಂದ ಬರುವಂತಹ 25 ಸಾವಿರಕ್ಕೂ ಅಧಿಕ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಹಾಗಾಗಿ, ಒಂದು ವಾರಗಳ ಕಾಲ ಚಿಕ್ಕಮಗಳೂರು ಜಿಲ್ಲೆ ಸೂಕ್ಷ್ಮ ಜಿಲ್ಲೆಯಾಗಿದ್ದು ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಡಿಸೆಂಬರ್ 15ರ ಭಾನುವಾರ ಬೆಳಗ್ಗೆ 10 ಗಂಟೆ ಬಳಿಕ ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ಮುಕ್ತವಾಗಲಿದೆ.
Leave a comment