ಚಿಕ್ಕಮಗಳೂರು: ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅಯ್ಯನಕೆರೆಯಲ್ಲಿ ತೂಬು ಮತ್ತು ಕೆರೆ ದುರಸ್ತಿಗೆ ಐದು ಕೋಟಿ ಹಣವನ್ನು ಒದಗಿಸಲಾಗಿದ್ದು, ಮಳೆಗಾಲ ಮುಗಿದ ಕೂಡಲೇ ಏರಿಯನ್ನು ಸೌಂದರ್ಯ ವರ್ಧಿಸಿ ಪ್ರವಾಸಿಗರನ್ನು ಹೆಚ್ಚು ಆಕರ್ಷಣೀಯಗೊಳಿಸಲಾಗುವುದು ಎಂದು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪವಿರುವ ಅಯ್ಯನಕೆರೆಗೆ ಇಂದು ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯಿಂದ ಇಂದು ನಗರದ ಅಯ್ಯನಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಈ ಕೆರೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಹೆಕ್ಷ್ಟೇರ್‌ಗಳಷ್ಟು ಅಚ್ಚುಕಟ್ಟುದಾರರಿದ್ದಾರೆ, ಅದರ ಜೊತೆ ಅಧಿಕೃತವಾಗಿ ಇನ್ನೂ ಐದು ಸಾವಿರ ಅಚ್ಚುಕಟ್ಟುದಾರರಿದ್ದಾರೆ. ಈ ಕೆರೆಯನ್ನು ಇಲಾಖೆ ವತಿಯಿಂದ ಸ್ವಚ್ಚಗೊಳಿಸಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇಲ್ಲಿ ಬಲ್ಲಾಳೇಶ್ವರ ದೇವಸ್ಥಾನವಿದ್ದು ದೇವರ ಅನುಗ್ರಹ ಹಾಗೂ ಎಲ್ಲ ಯತಿವರ್ಯರ ಆಶೀರ್ವಾದಿಂದ ಇಲ್ಲಿನ ಎಲ್ಲಾ ಅಚ್ಚುಕಟ್ಟುದಾರರ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೆಗೌಡ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಗುರುಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಸರ್ವರ ಸಮ್ಮುಖದಲ್ಲಿ ಇಂದು ಬಾಗಿನ ಅರ್ಪಣೆಯಾಗಿದೆ. ನಮ್ಮ ಹಿರಿಯರು ಅಂದು ಸ್ಥಾಪನೆ ಮಾಡಿರುವ ಕೆರೆಯಿದು. ಈ ಕೆರೆಗೆ ಪ್ರಕೃತಿಯೇ ಹೆಚ್ಚು ಸಹಾಯ ಮಾಡಿದೆ. ಇಂತಹ ನೈಸರ್ಗಿಕ ಮೂಲ ಹೊಂದಿದ ಕೆರೆ ಇದಾಗಿದೆ. ರೈತರು ಈ ಕೆರೆಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಈ ನೀರನ್ನು ಸರಿಯಾಗಿ ಬಳಕೆ ಮಾಡಿದರೆ ಐದು ಹದ ಮಾಡಬಹುದು.
ಆದರೆ ಇದು ಎರಡೇ ಹದವಾಗಿದೆ. ಆದ್ದರಿಂದ ಇದು ನಮ್ಮ ಜೀವಾಳ ಮುಂದಿನ ದಿನಗಳಲ್ಲಿ ಅಚ್ಚುಕಟ್ಟುದಾರರು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ನೀರಾವರಿ ಇಲಾಖೆಯವರು ಚಾನಲ್ ಹಾಗೂ ಕೆರೆಯನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಚತೆ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಸುತ್ತಮುತ್ತಲ ಜನರಿಗೆ ಈ ಕೆರೆಯಿಂದ ಒದಗಿಸಲಾಗಿದ್ದು, ನೀರಾವರಿಗೆ ಇದನ್ನು ಬಳಸಿಕೊಳ್ಳುವುದರಿಂದ ಈ ಕೆರೆಯನ್ನು ಅಭಿವೃದ್ದಿಪಡಿಸುವಂತೆ ಶಾಸಕರನ್ನು ಕೋರಿದರು.
ಬಸವ ತತ್ವ ಪೀಠದ ಪೀಠಾಧ್ಯಕ್ಷರಾದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ನಿರ್ವಾಣ ಸ್ವಾಮಿಗಳ ಆಶೀರ್ವಾದದಿಂದ ನಿರ್ಮಾಣವಾಗಿರುವ ಅಯ್ಯನಕೆರೆ ಈ ಕೆರೆಕಟ್ಟೆ ಒಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕಿಟ್ಟು ಪವಾಡ ಸದೃಶರಾಗಿ ಬದುಕಿ ಈ ಕೆರೆಯನ್ನು ಉಳಿಸಿರುವುದರಿಂದ ಈ ಭಾಗದ ಸುತ್ತಮುತ್ತಲಿನ ಎಲ್ಲಾ ಜನರ ಜೀವನಾಡಿಯಾಗಿದೆ. ಕೆರೆಯನ್ನು ಆಶೀರ್ವದಿಸಿದ ಕಾರಣಕ್ಕೆ ಇದಕ್ಕೆ ಅಯ್ಯನಕೆರೆ ಎಂಬ ಹೆಸರು ಬಂದಿದೆ ಎಂದರು.
ಎಲ್ಲಿ ನೀರಿನ ಸೌಕರ್ಯ ಇದೆಯೋ ಅಲ್ಲಿ ವಿಶೇಷವಾಗಿ ನಾಗರಿಕತೆಗಳು ಬೆಳೆದಿವೆ. ಆ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಸುತ್ತಮುತ್ತ ಒಂದಿಷ್ಟು ಸಮೃದ್ಧಿಯಾಗಿರುವ ಜನರು ಇದ್ದಾರೆ ಎಂಬುದಕ್ಕೆ ಇಂತಹ ಅಯ್ಯನಕೆರೆಯೇ ಕಾರಣ. ಕೆರೆಯನ್ನು ಅವಲಂಬಿಸಿ ಸಾವಿರಾರು ಜೀವರಾಶಿಗಳು ವಾಸವಾಗಿರುವುದು ನಾವು ಗಮನಿಸಬಹುದು ಇದರಿಂದ ಜೀವ ವೈವಿಧ್ಯತೆ, ಪ್ರಾಕೃತಿಕ ಸಂಪನ್ಮೂಲ ಹೆಚ್ಚಳವಾಗಿರುವುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೆರೆ ತುಂಬಿದ್ದು ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಹದಿನೈದು ದಿನ ಮುಂಚಿತವಾಗಿಯೇ ಕೆರೆ ತುಂಬಿದೆ. ಈ ಭಾಗದ ಜನರಿಗೆ ಭವಿಷ್ಯದ ಭರವಸೆ ನೀಡಿರುವ ಇಂತಹ ಕೆರೆಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದರು.
ಮುಖಂಡ ಮಹಡಿಮನೆಸತೀಶ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಹುಲಿಕೆರೆ ಶ್ರೀ ವೀರಪ್ಪ ಲಿಂಗ ಸ್ವಾಮೀಜಿ, ಶ್ರೀ ಕಡೂರಿನ ಜ್ಞಾನಪ್ರಭ ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಶಿವಯೋಗಿ ಶಂಕರ ಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷರಾದ ರಾಜಮ್ಮ, ಮಂಗಳ ಹೆಚ್.ಡಿ.ತಮ್ಮಯ್ಯ, ಮುಖಂಡರುಗಳಾದ ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಹೆಚ್.ಪಿ.ಮಂಜೇಗೌಡ, ಪ್ರವೀಣ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
Five crores for repairing the hole in Ayyanakere – Lake
Leave a comment