ಚಿಕ್ಕಮಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಫೆ.೧೦ ರಂದು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ರೈತ ಸಂಘದ ನೂತನ ಜಿಲ್ಲಾಧ್ಯಕ್ಷ ಡಿ. ಮಹೇಶ್ ತಿಳಿಸಿದರು
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತಮನಾಡಿ ಅಂದು ಬೆಳಗ್ಗೆ ೧೧ ಗಂಟೆಗೆ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ಸಾಗಿ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು
ರೈತರಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ನಬಾರ್ಡ್ ಶೇ.೬೦ ರಷ್ಟು ಕಡಿತಗೊಳಿಸಿರುವುದನ್ನು ವಿರೋಧಿಸಲಾಗುವುದೆಂದು ಹೇಳಿ, ರೈತರ ಹಕ್ಕನ್ನು ಕಸಿದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಈ ಪ್ರತಿಭಟನೆಯನ್ನು ರಾಜ್ಯಸಂಘದ ಕರೆಯ ಮೇರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಂಜೆ ೬ ಗಂಟೆ ನಂತರ ಸಾಲ ವಸೂಲಿಗೆ ಯಾವುದೇ ರೈತರ ಮನೆಗೆ ಹೋಗಬಾರದು. ಸಾಲ ಪಡೆದವರನ್ನು ಹೊರತುಪಡಿಸಿ ಇತರೆ ಸದಸ್ಯರೊಂದಿಗೆ ಚರ್ಚಿಸಬಾರದು, ಆರ್‌ಬಿಐ ವಿಧಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂಬಿತ್ಯಾಧಿ ಬೇಡಿಕೆಗಳನ್ನು ಮುಂದಿಟ್ಟು ಅಂದು ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಮೈಕ್ರೋಫೈನಾನ್ಸ್ ರದ್ದುಪಡಿಸುವಂತೆ ರೈತಸಂಘ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿರುವುದನ್ನು ಸ್ವಾಗತಿಸಿದ ಅವರು, ಪರಿಣಾಮಕಾರಿಯಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಜಾರಿಮಾಡಬೇಕೆಂದು ಒತ್ತಾಯಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲ ನೀಡುವಾಗ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿ ಸಾಲ ನೀಡುತ್ತಿದ್ದಾರೆ. ಇದರ ಪರಿಣಾಮ ಪ್ರತೀ ಮನೆಯಲ್ಲೂ ಸಾಲಗಾರರಿದ್ದಾರೆ. ವಸೂಲಿಗೆ ಸಾಲ ನೀಡುವ ಸಂದರ್ಭದಲ್ಲಿ ಮಹಿಳೆಯರ ಗುಂಪು ಸಭೆ ನಡೆಸಿ ಅವರುಗಳಿಂದ ಸಹಿ ಪಡೆದಿರುತ್ತಾರೆ. ಸಾಲ ನೀಡದಿದ್ದರೆ ಸಹಿಹಾಕಿದ ಮಹಿಳೆಯರೆಲ್ಲರೂ ಸೇರಿ ಸಾಲ ಪಾವತಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ವರಿಷ್ಠ ಕೆ.ಕೆ. ಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಎಂ. ದಯಾನಂದ್, ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮೇಗೌಡ, ಖಜಾಂಚಿ ಕೆ.ಬಿ. ಲೋಕೇಶ್, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಕೆ.ಟಿ. ಆನಂದ್, ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ಉಮೇಶ್, ಪರ್ವತೇಗೌಡ, ಬಿ.ರಾಮೇಗೌಡ, ನಜ್ಮಾಅಲಿ ಮತ್ತಿತರರು ಉಪಸ್ಥಿತರಿದ್ದರು.
Farmers’ association holds massive protest against microfinance harassment
Leave a comment