ಚಿಕ್ಕಮಗಳೂರು : ಮಲೆನಾಡಿನಲ್ಲಿ ಆನೆ ಹಾವಳಿ ತೀವ್ರಗೊಂಡಿದ್ದು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಬೇಕು ಎಂದು ಮಾಜಿ ಸಚಿವ ಬಿ.ಬಿ ನಿಂಗಯ್ಯ ಒತ್ತಾಯಿಸಿದರು.
ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಆನೆ ಹಾವಳಿಗೆ ಶಾಶ್ವತ ಪರಿಹಾರ ಹುಡುಕಲು ಯತ್ನಿಸಬೇಕು. ಕಳೆದ 15 ದಿನಗಳಿಂದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾರಿಬೆಟ್ಟ ಸುತ್ತಮುತ್ತ ಬೀಟ್ಟಮ್ಮ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ಕಾಫಿ ಮೆಣಸು ಸೇರಿದಂತೆ ನೂರಾರು ಎಕರೆ ತೋಟ ಹಾನಿಗೊಳಗಾಗಿವೆ ಜೊತೆಗೆ ಕಾಫಿ ಕೊಯ್ಲಿನ ಸಂದರ್ಭವಾದ್ದರಿಂದ ತೋಟಗಳಿಗೆ ಕಾರ್ಮಿಕರು ತೆರಳಲು ಸಾಧ್ಯವಾಗುತ್ತಿಲ್ಲ ಅಲ್ಲದೇ ಕಾಫಿ ಹಣ್ಣುಗಳು ಉದುರುತ್ತಿದ್ದು ಕೋಟ್ಯಂತರ ರೂ. ನಷ್ಟ ಸಂಭವಿಸುವ ಭೀತಿ ಎದುರಾಗಿದೆ.
ಕಾರ್ಮಿಕರು ಹಾಗೂ ತೋಟದ ಮಾಲೀಕರಿಗೆ ಜೀವದ ಅಪಾಯ ಕೂಡ ಎದುರಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ಉತ್ತರ ಕೂಡಾ ಸಮಂಜಸವಾಗಿಲ್ಲ. ಕಾಡಾನೆಗಳು ರಾತ್ರಿಪೂರ್ತಿ ಬೆಳೆನಾಶ ಮಾಡಿ ಬೆಳಗಿನ ವೇಳೆ ಮಲಗಿರುತ್ತವೆ. ಅಲ್ಲದೆ ಬೀಟ್ಟಮ್ಮ ಗ್ಯಾಂಗಿನಲ್ಲಿ ನಾಲ್ಕು ಮರಿಗಳಿದ್ದು, ಸ್ಥಳಾಂತರಗೊಳಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಆನೆ ಹಾವಳಿಯಿಂದ ಉಂಟಾಗಿರುವ ನಷ್ಟದ ವೈಜ್ಞಾನಿಕ ಸಮೀಕ್ಷೆ ಆಗಬೇಕು ಮತ್ತು ಸೂಕ್ತ ಪರಿಹಾರದ ಮೊತ್ತವನ್ನು ನೀಡಬೇಕೆಂದು ಬಿ.ಬಿ ನಿಂಗಯ್ಯ ಒತ್ತಾಯಿಸಿದರು.
Leave a comment