ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಸುಮಾರು 2.25 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.
ಕರ್ಕಿಪೇಟೆ ಗ್ರಾಮದ ನಿವಾಸಿಯಾದ ವೃದ್ಧೆಯು ಸಂಜೆ 5 ಗಂಟೆ ಸುಮಾರಿಗೆ ವಾಕಿಂಗ್ ಹೊರಟಿದ್ದು, ಕೆಂಪನಹಳ್ಳಿ ರಸ್ತೆಯ ಸಾಯಿಬಾಬ ಸಾಮೀಲ್ ದಾಟಿದ ನಂತರ ಮಂಡಿ ನೋವಿನ ಕಾರಣ ರಸ್ತೆ ಪಕ್ಕದ ಸೇತುವೆಯ ಮೇಲೆ ವಿಶ್ರಮಿಸಲು ಕುಳಿತಿದ್ದರು.
ಈ ಸಮಯದಲ್ಲಿ ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ಸಂಜೆ ಸುಮಾರು 5-30ರ ವೇಳೆಗೆ ಮುಖಕ್ಕೆ ಮಾಸ್ಕ್ ಧರಿಸಿ ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊದಲು ವೃದ್ಧೆಯ ಹತ್ತಿರ ಬಂದು ಮಾತನಾಡಿಸುವಂತೆ ನಟಿಸಿ ಮುಂದೆ ಹೋಗಿದ್ದಾರೆ.
ನಂತರ ಪುನಃ ಸ್ಕೂಟಿಯನ್ನು ಹಿಂತಿರುಗಿಸಿಕೊಂಡು ಬಂದು, ವೃದ್ಧೆಯನ್ನು ಅಡ್ಡಗಟ್ಟಿ ಸ್ಕೂಟಿಯ ಹಿಂದೆ ಕುಳಿತಿದ್ದ ವ್ಯಕ್ತಿಯು ಏಕಾಏಕಿ ವೃದ್ಧೆಯ ಕೊರಳಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ.
ವೃದ್ಧೆ ಜೋರಾಗಿ ಕಿರುಚಿಕೊಂಡಾಗ, “ಕಿರುಚಾಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿ, ಅವರನ್ನು ಸೇತುವೆಯ ಮೇಲೆ ತಳ್ಳಿದ್ದಾರೆ.
ಈ ತಳ್ಳಾಟದ ರಭಸಕ್ಕೆ ವೃದ್ಧೆಯ ಬಲ ಮೊಣಕೈಗೆ ರಕ್ತಗಾಯವಾಗಿದ್ದು, ಕಪ್ಪು ಬಣ್ಣದ ಜರ್ಕೀನ್ ಧರಿಸಿದ್ದ ಆರೋಪಿಗಳು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಸುಲಿಗೆಯಾದ ಚಿನ್ನದ ಸರದ ಮೌಲ್ಯ ಅಂದಾಜು 2,25,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವೃದ್ಧೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
Elderly woman’s gold chain stolen
Leave a comment