ಚಿಕ್ಕಮಗಳೂರು: ಜಿಲ್ಲಾ ಮಟ್ಟದ ೧೦೪೬ನೇ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಮತ್ತು ದೇವಾಂಗ ಜನಜಾಗೃತಿ ಹಾಗೂ ಸಂಘಟನಾ ಸಮಾವೇಶ ಏಪ್ರಿಲ್ ೨ ರ ಗುರುವಾರ ಕಡೂರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ (ಎಂಆರ್ಎಂ ರಂಗಮಂದಿರ) ಕಡೂರು ತಾಲೂಕು ದೇವಾಂಗ ಸಮಾಜ ಹಾಗೂ ಜಿಲ್ಲಾ ಸಂಘದ ವತಿಯಿಂದ ಅದ್ದೂರಿಯಾಗಿ ಜರುಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸ್ ತಿಳಿಸಿದರು.
ಅವರು ಇಂದು ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ ೨ ರ ಗುರುವಾರ ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾತಂಡಗಳ ಮೂಲಕ ಅದ್ದೂರಿಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಹಂಪಿ ಹೇಮಕುಟದ ದೇವಾಂಗ ಗುರುಗಳಾದ ಶ್ರೀ ದಯಾನಂದ ಪುರಿ ಸ್ವಾಮಿ, ಮಹಾರಾಷ್ಟ್ರದ ಸೊಲ್ಲಾಪುರದ ಶ್ರೀ ಅಭಿನವ ರಾಮಲಿಂಗ ಪಟ್ಟದೇವರು ಹಾಗೂ ಜಿಲ್ಲೆಯ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದರು.
ದೇವಾಂಗ ಸಂಘದ ಕಡೂರು ತಾಲೂಕು ಅಧ್ಯಕ್ಷ ಎಚ್.ಎಲ್.ರಂಗನಾಥ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸುವಂತೆ ತಿಳಿಸಲಾಗಿದೆ. ಜಿಲ್ಲೆಯಾದ್ಯಂತ ಗ್ರಾಮಗಳಿಂದ ಸುಮಾರು ೫,೦೦೦ ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಸಮಾರಂಭದದಲ್ಲಿ ಪಟ್ಟಣದ ವೈದ್ಯರಾದ ಡಾ. ಛಾಯಾಪತಿ ಅವರಿಗೆ ದೇವಲ ಮಹರ್ಷಿ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದರು.
ದೇವಾಂಗ ಸಮಾಜದ ಕಡೂರು ನಗರ ಅಧ್ಯಕ್ಷರಾದ ಹರೀಶ್ಕುಮಾರ್ ಮಾತನಾಡಿ, ಭವ್ಯ ಮೆರವಣಿಗೆಯ ನಂತರ ವೇದಿಕೆಯ ಕಾರ್ಯಕ್ರಮಗಳು ಗುರುಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ, ಶಾಸಕ ಕೆ.ಎಸ್. ಆನಂದ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ, ರಾಜ್ಯಸಭಾ ಸದಸ್ಯ ಕೆ.ನಾರಾಯಣ್, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಶಾಸಕರುಗಳಾದ ಎಚ್.ಡಿ. ತಮ್ಮಯ್ಯ, ಸಿ.ಟಿ.ರವಿ, ಮಾಜಿ ಸಚಿವರಾದ ಉಮಾಶ್ರೀ, ಎಂ.ಡಿ. ಲಕ್ಷ್ಮಿ ನಾರಾಯಣ್, ಜಿ.ಎಚ್.ಶ್ರೀನಿವಾಸ್, ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಬೆಳ್ಳಿ ಪ್ರಕಾಶ್ ಮುಂತಾದವರು ಭಾಗವಹಿಸಲಿದ್ದು ಸಾಹಿತಿಗಳಾದ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರ್ಯದರ್ಶಿ ಸಿ.ಎಸ್ ರವಿಕುಮಾರ್, ಆಚರಣಾ ಸಮಿತಿಯ ಯೋಗೀಶ್, ಭಗವತಿ ಹರೀಶ್, ಬೆಂಕಿ ಶೇಖರಪ್ಪ, ಮತ್ತಿತರರು ಉಪಸ್ಥಿತರಿದ್ದರು.
Devadasimayya Jayanti to be celebrated in Kadur on 2nd April
Leave a comment