ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಬಾನಳ್ಳಿ ಗ್ರಾಮದ ಅಪ್ರಾಪ್ತ ಬಾಲಕನ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಮರ್ಲೆ ಅಣ್ಣಯ್ಯ ಆಗ್ರಹಿಸಿದರು.
ಅವರು ಇಂದು ಸಂತ್ರಸ್ಥರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾನಳ್ಳಿ ಗ್ರಾಮದ ಶಿವಣ್ಣ ಎಂಬುವರ ಪುತ್ರ ೮ನೇ ತರಗತಿಯಲ್ಲಿ ಕಲಿಯುತ್ತಿದ್ದ ಪ್ರೀತಂ ಎಂಬ ಅಪ್ರಾಪ್ತ ಬಾಲಕ ಶಾಲೆಗೆ ಗೈರಾಗಿದ್ದ ಸಮಯದಲ್ಲಿ ರತ್ನಾಕರಗೌಡ ಎಂಬಾತ ಬಾಕನನ್ನು ಬಲವಂತವಾಗಿ ರಮೇಶ್ ಎಂಬುವರ ತೋಟಕ್ಕೆ ಟಿಂಬರ್ ಕೆಲಸಕ್ಕೆ ಕರೆದುಕಂಡು ಹೋಗಿದ್ದಾರೆ.
ಆ ಸಮಯದಲ್ಲಿ ಮರದ ದಿಮ್ಮಿಗಳನ್ನು ಟ್ರ್ಯಾಕ್ಟರ್‌ಗೆ ತುಂಬುವಾಗ ಮರದ ದಿಮ್ಮಿ ಪ್ರೀತಂನ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡ ಆತ ಮೃತಪಟ್ಟಿದ್ದಾನೆ. ಇದು ವಾಸ್ತವ ಸತ್ಯ. ರತ್ನಾಕರಗೌಡ ಎಂಬಾತ ಯಾವುದೇ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ್ಯ ತಾಳಿದ ಪರಿಣಾಮ ಪ್ರೀತಂ ಸಾವಾಗಿದೆ.
ಆದರೆ, ಈ ಸಾವನ್ನು ಮರೆಮಾಚಲು ಪ್ರೀತಂ ಪಿಡ್ಸ್ ಬಂದು ತಲೆ ಸುತ್ತಿ ಬಿದ್ದಿದ್ದಾನೆ ಎಂದು ಕಥೆಕಟ್ಟಿ ಬಾಲಕನ ತಂದೆಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರೀತಂ ಬದುಕುಳಿಯಲಿಲ್ಲ ಎಂದು ಹೇಳಿದರು.
ಈ ಪ್ರಕರಣ ಸಂಬಂಧ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಈವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಶವ ಪರೀಕ್ಷೆ ವರದಿಯನ್ನು ಕೂಡ ಪೊಲೀಸರು ನಮಗೆ ನೀಡುತ್ತಿಲ್ಲ. ಶಾಲೆಗೆ ಹೋಗುತ್ತಿದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನನ್ನು ಬಲವಂತವಾಗಿ ಟಿಂಬರ್ ಕೆಲಸಕ್ಕೆ ಕರೆದುಕೊಂಡು ಹೋಗಿ ಅವನ ಸಾವಿಗೆ ಕಾರಣಕರ್ತರಾಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೂ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಮೃತ ಪ್ರೀತಂ, ತಂದೆ ಶಿವಣ್ಣ ಹೇಳಿದರು.
D.S̤.S demands a thorough investigation into the boy’s death
Leave a comment