ಚಿಕ್ಕಮಗಳೂರು: : ಕಳೆದ ೧೯ ವರ್ಷದಲ್ಲಿ ಆಡಳಿತದಲ್ಲಿದ್ದಾಗ ಬಡವರಿಗೆ ನಿವೇಶನ, ಮನೆಯ ಹಕ್ಕುಪತ್ರ ನೀಡದ ಮಾಜಿ ಶಾಸಕರು ಈಗ ನಗರಸಭೆ ಮುಂದೆ ಇತ್ತೀಚೆಗೆ ಹಕ್ಕುಪತ್ರಕ್ಕಾಗಿ ಪ್ರತಿಭಟನೆ ಮಾಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ನಗರ ಆಶ್ರಯ ಸಮಿತಿ ಸದಸ್ಯರು ಟೀಕಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಪ್ರಸಾದ್ ಅಮೀನ್ ಮಾತನಾಡಿ, ೨೦೦೪ ರಿಂದ ೨೦೨೩ ರವರೆಗೆ ಬಿಜೆಪಿಯ ಶಾಸಕರು ಈ ಕ್ಷೇತ್ರದಲ್ಲಿ ಆರಿಸಿ ಬಂದಿದ್ದಾರೆ. ಆಗ ಅವರು ನಿವೇಶನ ರಹಿತರಿಗೆ ನಿವೇಶನ ಹಂಚುವ ಕೆಲಸ ಮಾಡಲಿಲ್ಲ. ಸಗೀರ್ ಅಹ್ಮದ್ ಶಾಸಕರಾಗಿದ್ದ ಕಾಲದಲ್ಲಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಯಿತೇ ವಿನಾಃ ಕಳೆದ ೧೯ ವರ್ಷದಲ್ಲಿ ಒಂದೇ ಒಂದು ಹಕ್ಕು ಪತ್ರ ನೀಡಲಿಲ್ಲ. ಸ್ವಾಮ್ಯಪತ್ರ, ಸ್ವಾಧೀನ ಪತ್ರ ಎಂಬ ನಕಲಿ ಹಕ್ಕುಪತ್ರಗಳನ್ನು ಜನರಿಗೆ ನೀಡಿ ಅವರನ್ನು ಯಾಮಾರಿಸಿ ಚುನಾವಣೆಯಲ್ಲಿ ಮತ ಪಡೆದರೇ ವಿನಾಃ ಅವರಿಗೆ ನೈಜ ಹಕ್ಕುಪತ್ರ ನೀಡಲಿಲ್ಲ. ಇದೀಗ ಕಾಂಗ್ರೆಸ್ ಸರಕಾರ ಪ್ರತಿ ಮನೆಮನೆಗೆ ಸರ್ವೆ ನಡೆಸಿ ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಮತ್ತೊಬ್ಬ ಸದಸ್ಯ ಎನ್.ಕೆ ಮಧು ಮಾತನಾಡಿ, ಇಂದಿರಾಗಾಂಧಿ, ಕಲ್ದೊಡ್ಡಿ, ರಾಜೀವ್‌ಗಾಂಧಿ, ಕಲ್ಯಾಣ ನಗರದ ಆಶ್ರಯ ಬಡಾವಣೆಗಳಲ್ಲಿ ೨೫೦ ಕ್ಕೂ ಹೆಚ್ಚು ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ. ಅಲ್ಲಿ ಅರ್ಹ ಫಲಾನಭವಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ಸಮಿತಿ ಮಾಡಲಿದೆ ಎಂದರು.
ಬಿಪಿಎಲ್ ಕಾರ್ಡ್‌ಗಳನ್ನು ಈ ಸರಕಾರ ರದ್ದು ಮಾಡುತ್ತಿದೆ ಎಂದು ನಗರಸಭೆ ಮುಂದೆ ಗೋಳಿಡುವ ಮಾಜಿ ಶಾಸಕರು, ಸದನದಲ್ಲಿ ಜನಸಂಖ್ಯೆಗಿಂತ ಬಿಪಿಎಲ್ ಕಾರ್ಡ್‌ಗಳು ಹೆಚ್ಚಾಗಿವೆ. ಇವುಗಳನ್ನು ರದ್ದುಪಡಿಸಲು ನಿಮಗೆ ಯಾರ ಭಯವಿದೆ ಎಂದು ಆಹಾರ ಸಚಿವರನ್ನು ಪ್ರಶ್ನಿಸುತ್ತಾರೆ.
ಈ ರೀತಿಯ ಗೋಸುಂಬೆತನದ ರಾಜಕಾರಣವನ್ನು ಬಿಟ್ಟು ಅವರು ಸೃಜನಶೀಲ ರಾಜಕಾರಣ ಮಾಡಲಿ ಎಂದು ಹೇಳಿದರು. ಕಳೆದ ೧೦-೧೨ ವರ್ಷದಿಂದ ನಗರದಲ್ಲಿ ಅನುಷ್ಠಾನವಾಗುತ್ತಿರುವ ಅಮೃತ್ ಮತ್ತು ಯುಜಿಡಿ ಯೋಜನೆಗಳಿಂದ ನಗರದ ರಸ್ತೆಗಳೆಲ್ಲಾ ಅಯೋಮಯವಾಗಿವೆ. ಇನ್ನೂ ಕೆಲವು ವಾರ್ಡ್‌ಗಳಿಗೆ ಅಮೃತ್ ಯೋಜನೆ ನೀರು ಪೂರೈಕೆಯಾಗುತ್ತಿಲ್ಲ. ನಗರದ ಒಳಚರಂಡಿ ಉಕ್ಕಿಹರಿಯುತ್ತಿದ್ದು, ಜನ ಶಾಪ ಹಾಕುತ್ತಿದ್ದಾರೆ. ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ನಮ್ಮ ಸರಕಾರ ಇದೀಗ ೧೦ ಕೋಟಿ ರೂ. ಬಿಡುಗಡೆ ಮಾಡಿದ್ದು, ಮಳೆ ನಿಂತ ಮೇಲೆ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಸದಸ್ಯರಾದ ಯಶೋಧ, ಫಯಾಜ್ ಅಹ್ಮದ್ ಉಪಸ್ಥಿತರಿದ್ದರು.
CT Ravi’s protest for charter is ridiculous
Leave a comment