ಚಿಕ್ಕಮಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ವಾಣಿಜ್ಯ ಸಿಲಿಂಡರ್ ಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು ಕಳಸ ತಾಲ್ಲೂಕಿನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳು ತೀವ್ರ ಅಭಾವ ಸೃಷ್ಟಿಯಾಗಿ ಜನಸಾಮಾನ್ಯರ ಹಾಗೂ ವರ್ತಕರ ಬದುಕು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ.
ಕಳೆದ ಒಂದು ವಾರದಿಂದ ಸಿಲಿಂಡರ್ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ತಾಲ್ಲೂಕಿನಾದ್ಯಂತ ಹಾಹಾಕಾರ ಮುಂದುವರಿದಿದೆ. ಹೋಟೆಲ್, ಕ್ಯಾಂಟೀನ್ ಮತ್ತು ಬೇಕರಿಗಳ ಒಲೆಗಳು ಅರಿಹೋಗಿದ್ದು, ವ್ಯಾಪಾರವಿಲ್ಲದೆ ಮಾಲೀಕರು ಅನಿವಾರ್ಯವಾಗಿ ಅಂಗಡಿಗಳಿಗೆ ಬೀಗ ಜಡಿಯುತ್ತಿದ್ದಾರೆ.
ಇದು ಕೇವಲ ವ್ಯಾಪಾರಸ್ಥರ ಸಮಸ್ಯೆಯಾಗಿ ಉಳಿಯದೆ, ಸಾವಿರಾರು ಪ್ರವಾಸಿಗರು ಮತ್ತು ಭಕ್ತಾದಿಗಳ ಮೇಲೆಯೂ ಗಂಭೀರ ಪರಿಣಾಮ – ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಳಸೇಶ್ವರ ದೇವಸ್ಥಾನ ಮತ್ತು ಪವಿತ್ರ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಮಾರ್ಗವಾಗಿಯೇ ಸಂಚರಿಸುತ್ತಾರೆ.
ದೂರದ ಊರುಗಳಿಂದ ಬರುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಕಳಸವೇ ಮುಖ್ಯ ಕೇಂದ್ರವಾಗಿದೆ. ಆದರೆ ಈಗ ಇಲ್ಲಿನ ಹೋಟೆಲ್ಗಳು ಮುಚ್ಚಿರುವುದರಿಂದ ಹಸಿವು ನೀಗಿಸಿಕೊಳ್ಳಲು ದಾರಿ ಕಾಣದೆ ಯಾತ್ರಿಕರು ಪರದಾಡುವಂತಾಗಿದೆ. ಪರ್ಯಾಯ ಇಂಧನಗಳ ವ್ಯವಸ್ಥೆಯೂ ಇಲ್ಲದೆ ಕಂಗಾಲಾಗಿರುವ ವರ್ತಕರು, ಈ ಬಿಕ್ಕಟ್ಟಿನಿಂದಾಗಿ ಆರ್ಥಿಕವಾಗಿ ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಿಲಿಂಡರ್ ಪೂರೈಕೆಯನ್ನು ಸಹಜ ಸ್ಥಿತಿಗೆ ತರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.
Commercial gas cylinder shortage in the district
Leave a comment