ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಉಮೇಶ್ ಜಮೀನು ಕೆಲಸಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ಬೀರುವನ್ನು ಆಯುಧಗಳಿಂದ ಮೀಟಿ ಅದರಲ್ಲಿದ್ದ ಸುಮಾರು 1.80 ಲಕ್ಷ ಮೌಲ್ಯದ ನಲವತ್ತು ಗ್ರಾಂ ಚಿನ್ನದ ಆಭರಣ ಹಾಗೂ ಮೂರು ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಮಧ್ಯಾಹ್ನ ಮನೆಗೆ ಮರಳಿದ ಉಮೇಶ್ ಅವರಿಗೆ ಕಳ್ಳತನವಾಗಿರುವುದು ತಿಳಿದುಬಂದಿದ್ದು ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ತಿಳಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
ಈ ಘಟನೆ ನಡೆದ ಬೆನ್ನಲ್ಲೇ ಕಳೆದ ರಾತ್ರಿ ಗ್ರಾಮದ ಇಂಟರ್ನೆಟ್ ಕೇಬಲ್‌ಗಳನ್ನು ಕತ್ತರಿಸಲಾಗಿದ್ದು ಇದು ಕಳ್ಳರದ್ದೇ ಕುತಂತ್ರ ಎಂದು ಶಂಕಿಸಲಾಗಿದೆ.
ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದಂತೆ ತಡೆಯಲು ಮತ್ತು ತಮ್ಮ ಓಡಾಟದ ದೃಶ್ಯಗಳು ದಾಖಲಾಗದಂತೆ ನೋಡಿಕೊಳ್ಳಲು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕಾಫಿ ಕೊಯ್ಲಿನ ಅವಧಿಯಾಗಿರುವುದರಿಂದ ಬೆಳೆಗಾರರು ಮತ್ತು ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Cash worth lakhs of rupees stolen from house
Leave a comment