- ಚಿಕ್ಕಮಗಳೂರು : ಹಾಸನದ ಜನ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಹೋದ ಹಿನ್ನೆಲೆ ಬಸ್ ಗಳ ಕೊರತೆಯಿಂದ ಪ್ರಯಾಣಿಕರು ಪರದಾಡಿದ್ದು ರೊಚ್ಚಿಗೆದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೆಎಸ್ಆರ್ ಟಿಸಿ ಮುಖ್ಯ ಕಚೇರಿ ಸಿಬ್ಬಂದಿಗಳನ್ನು ಕೂಡಿ ಹಾಕಿ ಬೀಗ ಹಾಕಿದ ಘಟನೆ ಇಂದು ಸಂಜೆ ನಡೆದಿದೆ.
ಹಾಸನ ಸಮಾವೇಶಕ್ಕೆ ಜನರು ತೆರಳಲು ಬಸ್ ಗಳು ಹೋಗಿದ್ದರಿಂದ ಚಿಕ್ಕಮಗಳೂರಿನಲ್ಲಿ ಕೆಎಸ್ಆರ್ ಟಿಸಿ ಬಸ್ ಗಳ ಕೊರತೆ ಉಂಟಾಗಿ ಸಂಜೆ ವೇಳೆಗೆ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡ ಬೇಕಾಯಿತು ಗಂಟೆ ಗಟ್ಟಲೇ ಕಾದರು ಬಸ್ ಗಳು ಬಾರದ ಕಾರಣ ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಜೊತೆಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಿಜೆಪಿ ಯುವ ಮೋರ್ಚಾ ಸೇರಿದಂತೆ ಹಲವು ಸಂಘಟನೆಗಳ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಸ್ ಗಳನ್ನು ಬಿಡಬೇಕು ಎಂದು ಪಟ್ಟು ಹಿಡಿದು ಕುಳಿತರು ಗಂಟೆ ಗಟ್ಟಲೇ ಪ್ರತಿಭಟಿಸಿದರೂ ಬಸ್ ಗಳು ಬಾರದ ಕಾರಣ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ನೌಕರರು ಒಳಗೆ ಇರುವಾಗಲೇ ಕಚೇರಿಯ ಬಾಗಿಲು ಮುಚ್ಚಿ ಬೀಗ ಹಾಕಲಾಯಿತು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಕಾರ್ಯದರ್ಶಿ ಸಚಿನ್ ಕುಮಾರ್ ಸೇರಿದಂತೆ ಹಲವರು ರಾಜ್ಯ ಸರ್ಕಾರ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು ಎಲ್ಲ ಮಾಯ ನಾಳೆ ಬಸ್ಸು ಮಾಯ ಎನ್ನುತ್ತಾ ಖಾಲಿ ಖಾಲಿ ಬಸ್ ಖಾಲಿ ಸಿದ್ದರಾಮಯ್ಯ ಜಾಲಿ, ಜಾಲಿ ಜಾಲಿ ಎಂದು ವ್ಯಂಗ್ಯ ಮಾಡಿದರು. ನಗರ ಪೊಲೀಸ್ ಠಾಣೆ ಪ್ರಭಾರ ಇನ್ಸ್ಪೆಕ್ಟರ್ ಸಚಿನ್ ಕುಮಾರ್ ಹಾಗೂ ಸಿಬ್ಬಂದಿ ಪ್ರತಿಭಟನಾ ಕಾರರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು
Leave a comment