ಜಯಪುರ: ಕೊಪ್ಪ ತಾಲ್ಲೂಕಿನ ಲೋಕನಾಥಪುರ ಸಮೀಪದ ಕೋಣಂಬಿ ಹಾಗೂ ಹೇರೂರು ಗ್ರಾಮದ ಹುತ್ತಿನಗದ್ದೆಯಲ್ಲಿ ಆನೆಗಳು ದಾಳಿ ಮಾಡಿ ಬೆಳೆ ಹಾಗೂ ಬೈಕ್ ಹಾನಿ ಮಾಡಿವೆ.
ಹೇರೂರು ಗ್ರಾಮದ ಹುತ್ತಿನಗದ್ದೆಯ ನಟರಾಜ್ ಅವರ ತೋಟದಲ್ಲಿ ಎರಡು ಆನೆಗಳು ಬೆಳೆದಿದ್ದ ಅಡಿಕೆ, ಬಾಳೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ಸಮೀಪದ ಸೈಟ್ ಬಳಿ ನಿಲ್ಲಿಸಿದ್ದ ಬೈಕನ್ನು ತುಳಿದು ಜಖಂಗೊಳಿಸಿವೆ.
ಸ್ಥಳಕ್ಕೆ ಕೊಪ್ಪ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಆನೆಗಳನ್ನು ಓಡಿಸಲು ಯತ್ನಿಸಿದ್ದಾರೆ. ಲೋಕನಾಥಪುರ ಸಮೀಪದ ಕೋಣಂಬಿ ಶ್ರೀಕರ, ನಾಗರಾಜ್, ಗುರುಪ್ರಸನ್ನ ಅವರ ಬೆಳೆ ಹಾನಿಯಾಗಿದೆ.
ಸ್ಥಳಕ್ಕೆ ಬಾರದ ಅಧಿಕಾರಿಗಳು: ಆನೆಗಳು ದಾಳಿ ನಡೆಸಿದ ಬಗ್ಗೆ ಕೊಪ್ಪ ಡಿಎಫ್‌ಒ ಶಿವಶಂಕರ್ ಅವರನ್ನು ಶ್ರೀಕರ ಅವರು ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಿದಾಗ ಸೋಮವಾರ ಸ್ಥಳಕ್ಕೆ ಅಧಿಕಾರಿಗಳು ಬರುತ್ತಾರೆ ಎಂದು ಹೇಳಿದ್ದರು. ಅಧಿಕಾರಿಯ ಉತ್ತರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಬೆಳೆಹಾನಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರಾಣ ಹಾನಿಯಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.
Bike damaged in elephant attack in Huttinagadde
Leave a comment