ಕಡೂರು: ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ಭಾನುವಾರ ರಾತ್ರಿ ಕಾರು ಹಿಂತೆಗೆಯುವ ವಿಷಯಕ್ಕೆ ಸಂಬಂಧಿಸಿ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಚಿಕ್ಕಮಗಳೂರಿನ ಸಂದೇಶ್ ಎಂಬುವರು ಭಾನುವಾರ ರಾತ್ರಿ ಕಡೂರಿನಲ್ಲಿರುವ ಪತ್ನಿಯ ಮನೆಗೆ ಬರುವಾಗ ಬಸವೇಶ್ವರ ವೃತ್ತದಲ್ಲಿ ಇನ್ನೊಂದು ಬದಿಯಿಂದ ಬಂದ ಕಾರೊಂದು ಅವರ ಕಾರಿನ ಮುಂದೆ ನಿಂತಿತು. ಸಂದೇಶ್ ಕೈಸನ್ನೆ ಮಾಡಿ ಕಾರನ್ನು ಮುಂದೆ ತೆಗೆಯಲು ತಿಳಿಸಿದ್ದರು.
ಆದರೆ, ಈ ಸಂದರ್ಭದಲ್ಲಿ ಎದುರು ಇದ್ದವರು ಕಾರನ್ನು ಮುಂದಕ್ಕೆ ತೆಗೆಯುವ ಬದಲು ನಿಂದಿಸಿದರು. ಏಕೆ ನಿಂದಿಸುತ್ತೀರಿ ಎಂದು ಪ್ರಶ್ನಿಸುವಾಗ ಇನ್ನೋವಾ ಕಾರಿನಿಂದ ಇಳಿದ ಸಂತೋಷ್ ಸೇರಿದಂತೆ ಐವರು ಹೊಡೆದು, ಚಿನ್ನದ ಸರವನ್ನು ಕಿತ್ತು ಹಾಕಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ’ ಎಂದು ಸಂದೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಂದೇಶ್ ಅವರು ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರ ಅಳಿಯನಾಗಿದ್ದು, ಹಲ್ಲೆಯನ್ನು ಖಂಡಿಸಿ ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಕಡೂರು ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಸಿಪಿಐ ಜತೆ ಮಾತುಕತೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರು ಕಡೂರಿಗೆ ಬಂದು, ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ಆರೋಪಿ ಸಂತೋಷ್ ಮತ್ತು ನಾಲ್ವರು ಸ್ನೇಹಿತರ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಲು ತಂಡ ರಚಿಸಿರುವುದಾಗಿ ಮಾಹಿತಿ ನೀಡಿದರು.
ತಡರಾತ್ರಿ 2 ಗಂಟೆ ವೇಳೆಗೆ ಪ್ರತಿಭಟನೆ ಹಿಂಪಡೆದರು. ಆರೋಪಿ ಸಂತೋಷ್, ಸಹಚರರು ನಾಪತ್ತೆಯಾಗಿದ್ದು ಪೊಲೀ ಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
Belliprakash protest at Kadur police station
Leave a comment