ಬಳ್ಳಾರಿ: ಬಳ್ಳಾರಿಯಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿರೀಕ್ಷೆಯಂತೆಯೇ ಲೇಖಕಿ, ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಪದ್ಧತಿಯನ್ನು ಆರಂಭಿಸಿದೆ.
ಬಳ್ಳಾರಿ ನಗರದ ಹೊಟೇಲ್ನಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಅಂತಿಮಗೊಳಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾಧ್ಯಮಗಳಿಗೆ ತಿಳಿಸಿದರು.
‘ಸಮ್ಮೇಳನದ ಅಧ್ಯಕ್ಷತೆಗೆ ಬಾನು ಮುಷ್ತಾಕ್ ಅವರ ಹೆಸರನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 56 ಸದಸ್ಯ ಬಲದ ಸಮಿತಿಯಲ್ಲಿ ಹಾಜರಿದ್ದ 44 ಮಂದಿ ಬಾನು ಮುಷ್ತಾಕ್ ಹೆಸರಿಗೆ ಸರ್ವಾನುಮತದ ಸಮ್ಮತಿ ಸೂಚಿಸಿದರು. ಇವರನ್ನು ಹೊರತುಪಡಿಸಿದರೆ, ಕಸಾಪದ ಧಾರವಾಡ ಘಟಕದ ಅಧ್ಯಕ್ಷರು ಮಾಲತಿ ಪಟ್ಟಣಶೆಟ್ಟಿ ಅವರ ಹೆಸರನ್ನೂ, ಬೆಂಗಳೂರು ನಗರ ಘಟಕದ ಅಧ್ಯಕ್ಷರು ವೀಣಾ ಶಾಂತೇಶ್ವರ ಅವರ ಹೆಸರನ್ನೂ ಪ್ರಸ್ತಾಪಿಸಿದರು.
ಆದರೆ ಅಂತಿಮವಾಗಿ ಬಾನು ಮುಷ್ತಾಕ್ ಹೆಸರನ್ನೇ ಆಯ್ಕೆ ಮಾಡಲಾಯಿತು’ ಎಂದರು. ‘ಬಾನು ಮುಷ್ತಾಕ್ ಅವರು ನಮ್ಮ ಪ್ರಸ್ತಾವವನ್ನು ಒಪ್ಪಿಕೊಂಡಿದ್ದಾರೆ. ಕನ್ನಡದ ಕೆಲಸ ನನ್ನ ಮೊದಲ ಕರ್ತವ್ಯ ಎಂದು ನನಗೆ ಸಂದೇಶ ಕಳುಹಿಸಿದ್ದಾರೆ’ ಎಂದು ಜೋಶಿ ಸ್ಪಷ್ಟಪಡಿಸಿದರು.
ಈವರೆಗೆ ಸಮ್ಮೇಳನ ನಡೆಯುವ ಒಂದೆರಡು ತಿಂಗಳ ಮೊದಲಷ್ಟೇ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆರು ತಿಂಗಳಿಗೆ ಮೊದಲೇ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರ ಆಯ್ಕೆಗೂ ಮೊದಲೇ ಸಮ್ಮೇಳನದ ಸ್ವಾಗತ ಸಮಿತಿ, ಉಪ ಸಮಿತಿಗಳು ರಚನೆಯಾಗಿರುತ್ತಿದ್ದವು.
ಜತೆಗೇ, ಸ್ಥಳ, ದಿನ ನಿಗದಿಯಾಗುತ್ತಿತ್ತು. ಆದರೆ, ಈ ಬಾರಿ ಇವು ಯಾವುವೂ ಆಗಿಲ್ಲ. ಪ್ರಮುಖವಾಗಿ, ಪರಿಷತ್ತಿನಿಂದ ಅಧಿಕೃತವಾಗಿ ಘೋಷಣೆಯಾಗು ವವರೆಗೆ ಸಮ್ಮೇಳನದ ಅಧ್ಯಕ್ಷರ ಹೆಸರು ಗೋಪ್ಯವಾ ಗಿರುತ್ತಿತ್ತು. ಈ ಸಲ ಅದಕ್ಕೂ ಚ್ಯುತಿಯಾಗಿದ್ದು, ಬಾನು ಮುಷ್ತಾಕ್ ಅವರೇ ಸರ್ವಾಧ್ಯಕ್ಷರು ಎಂಬುದು ವಾರದ ಮೊದಲೇ ಬಹಿರಂಗವಾಗಿತ್ತು.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಹೆಚ್ಚು ಮಾತನಾಡದೇ ಸುದ್ದಿಗೋಷ್ಠಿಯಿಂದ ನಿರ್ಗಮಿಸಿದರು.
Banu Mushtaq elected as the President of the 88th All India Kannada Sahitya Sammelan
Leave a comment