ಚಿಕ್ಕಮಗಳೂರು: ದೇಶದ ಹಸಿವು ನೀಗಿಸಿದ ಹಸಿರು ಕ್ರಾಂತಿಯ ರೂವಾರಿ ಹಾಗೂ ಅಸಮಾನತೆಯ ವಿರುದ್ಧ ಸಂಘಟಿತ ಹೋರಾಟ ಕಟ್ಟಿದ ಮಹಾನ್ ಚೇತನ ಡಾ.ಬಾಬು ಜಗಜೀವನ್ ರಾಮ್ ಬದುಕು ಇಂದಿನ ಯುವಜನತೆಗೆ ದಾರಿದೀಪ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಬಣ್ಣಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್‌ರವರ ೧೧೯ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬೂಜಿ ಅವರು ಕೇವಲ ಒಬ್ಬ ರಾಜಕಾರಣಿಯಲ್ಲ, ಅವರು ಈ ದೇಶದ ರೈತರು, ಕಾರ್ಮಿಕರು ಮತ್ತು ದಲಿತರ ಧ್ವನಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ದೇಶದ ರಕ್ಷಣಾ ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ಅವರು ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.
ವಿದ್ಯಾರ್ಥಿ ದೆಸೆಯಿಂದಲೇ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರೊಂದಿಗೆ ಹೋರಾಡಿದ ಮಹಾನ್ ನಾಯಕ ಬಾಬೂಜೀ. ದೇಶವು ಆಹಾರದ ಕ್ಷಾಮ ಎದುರಿಸುತ್ತಿದ್ದ ಸಂದರ್ಭದಲ್ಲಿ ಕೃಷಿ ಮಂತ್ರಿಯಾಗಿ ರೈತರಿಗೆ ಧೈರ್ಯ ತುಂಬಿ, ‘ಹಸಿರು ಕ್ರಾಂತಿ’ಯ ಮೂಲಕ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ದೇಶಕ್ಕೆ ಗೆಲುವು ತಂದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವಿಂದು ಸಾಗಬೇಕಿದೆ. ಸಮಾಜದಲ್ಲಿ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತಿರುವ ಅಸ್ಪೃಶ್ಯತೆ ಮತ್ತು ತಾರತಮ್ಯ ಬೇರು ಸಹಿತ ಕಿತ್ತೆಸೆಯಬೇಕು. ಜಾತಿ ವ್ಯವಸ್ಥೆ ನಿರ್ಮೂಲನೆಯಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗಲು ಸಾಧ್ಯ. ಯುವಕರು ಮತ್ತು ವಿದ್ಯಾರ್ಥಿಗಳು ಬಾಬೂಜೀ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಯಮುಕ್ತ ವಾತಾವರಣದಲ್ಲಿ ಎಲ್ಲರೂ ಒಂದಾಗಿ ಬಾಳುವಂತಾಗಬೇಕು. ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಡಾ. ಬಾಬು ಜಗಜೀವನ್ ರಾಮ್ ಶೋಷಿತ ಸಮುದಾಯಗಳಿಗೆ ಸದಾ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.
ಬಾಬೂಜಿಯವರು ವಿದ್ಯಾರ್ಥಿ ಜೀವನದಲ್ಲೇ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ್ದರು. ಶಾಲಾ ದಿನಗಳಲ್ಲಿ ಮಡಕೆ ಒಡೆದು ಪ್ರತಿಭಟಿಸುವ ಮೂಲಕ ತಮ್ಮ ಧೈರ್ಯವನ್ನು ಪ್ರದರ್ಶಿಸಿದ್ದರು. ವಾರಣಾಸಿಯಂತಹ ಕಡೆಗಳಲ್ಲಿ ಶೋಷಣೆಗೆ ಒಳಗಾದರೂ, ಛಲ ಬಿಡದೆ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಾಬೂಜಿಯವರ ಹಾದಿ ನಮಗೆಲ್ಲರಿಗೂ ಪ್ರೇರಣೆ. ಅವರ ಜೀವನದ ಛಲ ನಮ್ಮ ಮೆದುಳಿನಲ್ಲಿ ಶಾಶ್ವತವಾಗಿ ದಾಖಲಾಗಬೇಕು ಎಂದರು.
ಬಾಬೂಜಿಯವರು ಕೇವಲ ಒಬ್ಬ ಸಮುದಾಯದ ನಾಯಕರಾಗಿರಲಿಲ್ಲ, ಅವರು ದೇಶದ ಹೆಮ್ಮೆಯ ಪುತ್ರ. ಮನೆಯ ಜವಾಬ್ದಾರಿಗಳ ನಡುವೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೈಲುವಾಸವನ್ನೂ ಅನುಭವಿಸಿದ್ದಾರೆ. ದೇಶದ ಹಿತಕ್ಕಾಗಿ ಅವರು ನೀಡಿದ ಕೊಡುಗೆ ಅನನ್ಯ ಎಂದರು.
ಇಂದು ನಾವು ಹೊಟ್ಟೆ ತುಂಬಾ ಅನ್ನ ಉಣ್ಣುತ್ತಿದ್ದೇವೆ ಎಂದರೆ ಅದಕ್ಕೆ ಬಾಬೂಜಿ ಅವರು ತಂದ ಹಸಿರು ಕ್ರಾಂತಿಯೇ ಕಾರಣ. ಕೃಷಿ ಕ್ಷೇತ್ರದಲ್ಲಿ ಅವರು ತಂದ ಸುಧಾರಣೆಗಳು, ಗೊಬ್ಬರ ಮತ್ತು ಮಣ್ಣಿನ ಸಂಶೋಧನೆಗಳು ಇಂದಿಗೂ ನಮಗೆ ದಾರಿದೀಪವಾಗಿವೆ. ಜಾತಿ ಪದ್ಧತಿಯ ನಿರ್ಮೂಲನೆಗೆ ಆರ್ಥಿಕ ಸಬಲೀಕರಣ ಅತಿ ಮುಖ್ಯವಾಗಿದ್ದು, ಆರ್ಥಿಕವಾಗಿ ಸದೃಢರಾದಾಗ ಮಾತ್ರ ಗೌರವಯುತ ಜೀವನ ಸಾಧ್ಯ ಎಂದರು.
ಹಸಿವು ಮುಕ್ತ ಭಾರತದ ಕನಸು ಕಂಡಿದ್ದ ಡಾ. ಬಾಬು ಜಗಜೀವನ್ ರಾಂ ಅವರ ಆಶಯದಂತೆ ಬಡತನ ನಿರ್ಮೂಲನೆ ಮಾಡುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಸ್.ಜಿ.ಶಿವಪ್ರಸಾದ್ ಉಪನ್ಯಾಸ ನೀಡಿ, ಭಾರತದಲ್ಲಿ ಸಮಾನತೆ ತರಲು ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಎಂಬ ಇಬ್ಬರು ಮಹಾನ್ ಚೇತನಗಳು ಜನ್ಮ ತಾಳಿದ ಈ ತಿಂಗಳು ಶೋಷಿತ ಸಮಾಜಕ್ಕೆ ಅತ್ಯಂತ ಮಹತ್ವವಾದದ್ದು ಎಂದು ಹೇಳಿದರು.
ಬಾಬು ಜಗಜೀವನ್ ರಾಮ್ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಆಳವಾಗಿ ಅಧ್ಯಯನ ಮಾಡುವುದು ಇಂದಿನ ಅಗತ್ಯವಾಗಿದೆ. ಅಂತಹ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುವುದು ಸೂಕ್ತವಾಗಲಿದೆ. ಜಗಜೀವನ್ ರಾಮ್ ಅವರು ತೋರಿದ ಹಾದಿ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಪ್ರಪಂಚದ ಶೋಷಿತ ವರ್ಗದ ಹೋರಾಟಕ್ಕೆ ಮಾದರಿಯಾಗಿದೆ. ಅವರ ಹೋರಾಟ ವಿಧಾನಗಳು ಸಮಾನತೆಯ ಸ್ಥಾಪನೆಗೆ ಅಡಿಪಾಯ ಹಾಕಿವೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್- ಈ ಇಬ್ಬರ ಮಾರ್ಗಗಳು ಭಿನ್ನವಾಗಿದ್ದರೂ, ಅವರ ಅಂತಿಮ ಗುರಿ ಶೋಷಣೆಯ ವಿರುದ್ಧದ ಹೋರಾಟ ಮತ್ತು ಸಮಾನತೆಯ ಸ್ಥಾಪನೆಯೇ ಆಗಿತ್ತು. ಶೋಷಿತ ಅಥವಾ ದಲಿತ ಸಮಾಜ ಎಂಬುದು ಏಕರೂಪದ್ದಲ್ಲ. ಅದು ಸಂಕೀರ್ಣತೆಯಿಂದ ಕೂಡಿದೆ. ಅಲ್ಲಿರುವ ಸಮಸ್ಯೆಗಳೂ ಸಹ ಏಕರೂಪದ್ದಲ್ಲ. ಆದ್ದರಿಂದ ಪ್ರತಿ ಶೋಷಿತ ಸಮುದಾಯದ ಸಮಸ್ಯೆಗಳನ್ನು ಅರ್ಥೈಸಿಕೊಂಡು, ಹೊಸ ಮಾನಸಿಕ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ನೆಹರೂ ಅವರ ನಂತರ ಭಾರತೀಯ ರಾಜಕೀಯ ರಂಗದಲ್ಲಿ ಸುದೀರ್ಘ ಕಾಲ ಸಂಸದೀಯ ಪಟುವಾಗಿ ಸೇವೆ ಸಲ್ಲಿಸಿದ ಹಿರಿಮೆ ಬಾಬುಜಿ ಅವರಿಗೆ ಸಲ್ಲುತ್ತದೆ. ಅವರ ರಾಜಕೀಯ ಮುತ್ಸದ್ಧಿತನ ಮತ್ತು ಸಾಧನೆ ಅಭೂತಪೂರ್ವವಾದುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ತಹಸೀಲ್ದಾರ್ ರೇಷ್ಮಾ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಕಾರ್ಯಕ್ರಮದಲ್ಲಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಬಿ.ಮಾಲತಿ ಸ್ವಾಗತಿಸಿದರು.
Babuji is a great spirit who quenched the hunger of the country.
Leave a comment