ಚಿಕ್ಕಮಗಳೂರು : ರಾಜ್ಯದಲ್ಲಿ ನಡೆಯುವ ಅತಿದೊಡ್ಡ ಜಾತ್ರೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಂತರಘಟ್ಟೆ ದುರ್ಗಾಂಬಾ ಜಾತ್ರೆಯು ವಿಶಿಷ್ಠತೆಯಿಂದ ಕೂಡಿದೆ.ಫೆಬ್ರವರಿ ತಿಂಗಳ 7 ನೇ ತಾರೀಖು ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರಿ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ.
ಜಾತ್ರೆ ನಡೆಯುವ ನಾಲ್ಕು ದಿನಗಳ ಮೊದಲು ಈ ಭಾಗದ ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ, ಶಿವನಿ,ಅಂತರಘಟ್ಟೆ ಜೊತೆಗೆ ಹಳ್ಳಿ ಹಳ್ಳಿಗಳಲ್ಲಿ ಅಮ್ಮನ ಹಬ್ಬ ಆಚರಿಸಿ ಮಾಂಸಾಹಾರಿ ಮತ್ತು ಸಸ್ಯಹಾರಿ ವಿಶೇಷ ಭೋಜನ ಬಹಳ ವಿಶೇಷವಾಗಿರುತ್ತದೆ.
ಸಸ್ಯಹಾರಿಗಳು ಬಹಳ ಕಡಿಮೆ ಆದರೆ ಮಾಂಸಹಾರಿ ಭೋಜನಕ್ಕೆ ಆದ್ಯತೆ ಹೆಚ್ಚು.
ಒಂದು ವಾರಗಳ ತನಕ ನಡೆಯುವ ಹಬ್ಬದ ವಿಶೇಷ ಏನೆಂದರೆ ಒಂದೇ ದಿನ ಹಬ್ಬ ಆಚರಿಸುವುದಿಲ್ಲ .ಒಂದೇ ದಿನದ ಬದಲು ಬೇರೆ,ಬೇರೆ ದಿನ ಹಬ್ಬ ಆಚರಿಸುವುದರಿಂದ ನೆಂಟರು,ಇಷ್ಟರು ಬಂಧು,ಬಳಗ ಮತ್ತು ಸ್ನೇಹಿತರು ಬಂದು ಹೋಗುವುದಕ್ಕೆ ಅನುಕೂಲ ಆಗುತ್ತದೆ ಎಂದು ಮಂಗಳವಾರ ಶುರು ಮಾಡಿ ಮುಂದಿನ ಮಂಗಳವಾರದ ತನಕ ಹಬ್ಬ ಆಚರಿಸುತ್ತಾರೆ.
ಹಬ್ಬದ ವಿಶಿಷ್ಟ ಮತ್ತು ವಿಶೇಷ, ರಾಜ್ಯದ ವಿವಿಧ ಕಡೆಗಳಿಂದ ಕುರಿ ಮಾರಾಟ ಮಾಡಲು ಬರುತ್ತಾರೆ.ಹಾವೇರಿ,ಶಿಗ್ಗಾವಿ, ಬೆಳಗಾವಿ ಮತ್ತು ಮಂಡ್ಯ ಜಿಲ್ಲೆಗಳಿಂದ ಕುರಿ ತಂದು ವಿಶಾಲ ಜಾಗದಲ್ಲಿ ವಹಿವಾಟು ನಡೆಸುತ್ತಾರೆ.ಹತ್ತರಿಂದ ಐವತ್ತು ಸಾವಿರದ ತನಕ ಕುರಿ ವ್ಯವಹಾರ ನಡೆಸುತ್ತಾರೆ. ಕೆಲವರು ಎರಡು ಮೂರು ಮನೆಯವರು ಸೇರಿಕೊಂಡು ಕುರಿ ಪಾಲು ಹಾಕಿಕೊಳ್ಳುವದು ಉಂಟು.ಈ ಭಾಗದಲ್ಲಿ ಕೋಟಿ,ಕೋಟಿ ವ್ಯಾಪಾರ ಮಾಡುತ್ತಾರೆ ಇದರ ಜೊತೆಗೆ ಮೇಕೆ,ಕೋಳಿ,ಕೋಳಿ ಮೊಟ್ಟೆ ಹಾಗೂ ಮಧ್ಯ ಲೆಕ್ಕವಿಲ್ಲದಷ್ಟು ವ್ಯಾಪಾರವಾಗುತ್ತದೆ.
ಹಬ್ಬಕ್ಕೆ ಬರುವ ಬಂಧು,ಬಳಗ ಮತ್ತು ಸ್ನೇಹಿತರಿಗಳಿಗೆ ನೀಡುವ ಆತಿಥ್ಯ ಎಂದು ಮರೆಯಲು ಸಾಧ್ಯವಿಲ್ಲ. ಗೊತ್ತು, ಪರಿಚಯವಿರಬೇಕು ಎಂಬ ನಿಯಮವಿಲ್ಲ ಎಲ್ಲರನ್ನೂ ಕರೆದು ಒಂದು ತುತ್ತಾದರು ಊಟ ಮಾಡಿ ಎಂಬ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಸ್ಯಹಾರವು ಇರುತ್ತದೆ ಆದರೆ ಕಡಿಮೆ, ಹೋಗಿ ಊಟ ಮಾಡದಿದ್ದರೆ ಒಂದು ಹಣ್ಣನ್ನು ಕೊಟ್ಟು ಕಳುಹಿಸುವ ಸಂಪ್ರದಾಯವಿದೆ.ಒಟ್ಟಾರೆ ಬಾಂಧವ್ಯ ಬೆಸೆಯುವ ಹಬ್ಬ ಎನ್ನಲೇ ಬೇಕು.
ಅಂತರಘಟ್ಟೆಯಲ್ಲಿ ನಡೆಯುವ ರಥೋತ್ಸವಕ್ಕೆ ಎತ್ತಿನ ಗಾಡಿ ಓಡಿಸುವ ಪದ್ದತಿ ಇದ್ದು ಲಕ್ಷ, ಲಕ್ಷ ಕೊಟ್ಟು ಹೊರಿ ( ಎತ್ತುಗಳು) ಖರೀದಿಸಿ ಶೃಂಗಾರ ಮಾಡಿ ಗಾಡಿ ಓಡಿಸುವ ಪದ್ದತಿ ಇದೆ. ಇತ್ತೀಚಿನ ವರ್ಷಗಳಲ್ಲಿ ಬೈಕ್,ಕಾರು,ಟ್ರಾಕ್ಟರ್ ಹಾವಳಿ ಹೆಚ್ಚುತ್ತಿದೆ ಆದರೂ ಅಂತರಘಟ್ಟಮ್ಮನ ಜಾತ್ರೆ ಮಾತ್ರ ರಾಜ್ಯದ ಐದಾರು ಜಿಲ್ಲೆಯ ಜನ ಸೇರುವುದು ಒಂದು ವಾರಗಳ ವಿಶೇಷ ಭೋಜನ ಭಕ್ಷ್ಯ ಸವಿಯುವ ಪರಿ ವರ್ಣನೆ ಮಾಡಲು ಸಾಧ್ಯವಿಲ್ಲ ಅದನ್ನು ಅನುಭವಿಸಿದರೆ ಮಾತ್ರ ಚೆಂದ,ಚೆಂದ.
Antaraghatte Durgamba Fair
Leave a comment