ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತೆ ಮುಂದುವರಿದಿದ್ದು,ನಾಲ್ಕು ದಿನಗಳ ಅಂತರದಲ್ಲಿ ಮತ್ತೊಂದು ಅಮಾಯಕ ಜೀವ ಬಲಿಯಾಗಿದ್ದು, ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದ ಲಕ್ಷ್ಮಿಪುರ ಗ್ರಾಮದ 60 ವರ್ಷದ ಮಂಜುನಾಥ್ ಎಂಬುವವರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.
ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿದ್ದ ಮಂಜುನಾಥ್ ಅವರಿಗೆ ವೈದ್ಯರು ಸಕಾಲಕ್ಕೆ ಸ್ಪಂದಿಸದ ಕಾರಣ, ಅವರು ಸ್ಟೆಚ್ಚರ್ ಮೇಲೆಯೇ ನರಳಾಡುವಂತಾಗಿತ್ತು. ಬೆಳಗಿನ ಜಾವ ಉಸಿರಾಟದ ಸಮಸ್ಯೆಯಿಂದ ಮಂಜುನಾಥ್ ಆಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡುವ ಬದಲು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರೋಗಿ ಉಸಿರಾಡಲು ಪರದಾಡುತ್ತಿದ್ದರೂ ಸುಮಾರು ಒಂದು ಗಂಟೆಗಳ ಕಾಲ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನಲಾಗಿದೆ. ಸಂತ್ರಸ್ತ ಕುಟುಂಬದವರು ಎಷ್ಟೇ ಅಂಗಲಾಚಿದರೂ ಸಿಬ್ಬಂದಿಗಳು ಮತ್ತು ವೈದ್ಯರು ಕ್ಯಾರೆ ಎನ್ನದೆ ದರ್ಪ ಮೆರೆದಿದ್ದಾರೆ ಎನ್ನುವ ಆರೋಪವಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಕೊನೆ ಕ್ಷಣದಲ್ಲಿ ಅವರನ್ನು ಐಸಿಯುವಿಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ.
ಕಳೆದ ಗುರುವಾರ ಆಲ್ಲೂರಿನ ಲಕ್ಷ್ಮಣ್ ಎಂಬುವರು ಕೂಡ ವೈದ್ಯರ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದರು. ಆಸ್ಪತ್ರೆಯ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡವರ ಜೀವದ ಜೊತೆ ಚೆಲ್ಲಾಟವಾಡುವ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Another innocent life lost due to negligence of the district hospital
Leave a comment