ಚಿಕ್ಕಮಗಳೂರು :
ನಕ್ಸಲರು ಭೇಟಿ ಬೆನ್ನಲ್ಲೇ ಮಲೆನಾಡಿನಲ್ಲಿ ಪೊಲೀಸರ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಮುಂಡಗಾರು ಲತಾ ತಂಡ ಊಟ ಮಾಡಿ ತೆರಳಿದ್ದ ಕಡೇಗುಂದಿ ಸುಬ್ಬೇಗೌಡರ ಕುಟುಂಬವನ್ನೂ ಕೂಡ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮಲೆನಾಡ ಕಾಡಂಚಿನ ಕುಗ್ರಾಮಕ್ಕೆ ನಕ್ಸಲರ ಭೇಟಿ ಹಿನ್ನೆಲೆ ಎಎನ್ಎಫ್ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. ನಕ್ಸಲರು ಊಟ ಮಾಡಿ ಹೋಗಿದ್ದ ಮನೆಯವರನ್ನು ವಿಚಾರಣೆ ಮಾಡಲಾಗುತ್ತಿದೆ. ಗನ್ ತೋರಿಸಿ ಬೆದರಿಸಿ ಸುಬ್ಬೇಗೌಡ ಮನೆಯಲ್ಲಿ ಊಟ ಮಾಡಿ ಹೋಗಿದ್ದ ನಕ್ಸಲರು ಬಂದು ಹೇಗೆ ವರ್ತಿಸಿದರು ಎಂದು ಪ್ರಶ್ನೆ ಮಾಡಿದ್ದಾರೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇಗೌಡರ ಮನೆಗೆ ಪೊಲೀಸ್ ನಕ್ಸಲ್ ನಿಗ್ರಹ ದಳದ ಸರ್ಪಗಾವಲು ಹಾಕಲಾಗಿದೆ. ಈ ಪ್ರಕರಣದ ತನಿಖಾಧಿಕಾರಿ ಆಗಿರುವ ಕೊಪ್ಪ ಡಿ.ವೈ.ಎಸ್ಪಿ. ಬಾಲಾಜಿ ಯವರು ವಿಚಾರಣೆ ನಡೆಸುತ್ತಿದ್ದಾರೆ. ಆ ದಿನ ರಾತ್ರಿ ಎಷ್ಟು ಜನ ಬಂದಿದ್ರು, ಅವರತ್ರ ಏನೇನಿತ್ತು, ಏನು ಹೇಳಿದ್ರು, ಏನು ಕೇಳಿದ್ರು… ಅಡುಗೆ ಏನು ಮಾಡಿದ್ರಿ, ಎಷ್ಟು ಜನಕ್ಕೆ ಮಾಡಿದ್ರಿ ಎಂಬೆಲ್ಲಾ ವಿಷಯ ಕಲೆ ಹಾಕಿ ವಿವಿಧ ಆಯಾಮಗಳಲ್ಲಿ ಹಾಗೂ ದೃಷ್ಟಿಕೋನದಲ್ಲಿ ವಿಚಾರಣೆ ನಡೆಸಿದ್ದಾರೆ. ಸುಬ್ಬೇಗೌಡ ಮನೆಯ ಸದಸ್ಯರ ವಿಚಾರಣೆ ಮಾಹಿತಿಯ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸರು ನಕ್ಸಲರು ಹೋದ ಮಾರ್ಗದಲ್ಲಿ ನಿರಂತರ ಕೂಂಬಿಂಗ್ ನಡೆಸ್ತಿದ್ದಾರೆ ಪೊಲೀಸ್- ಹಾಗೂ ಎ.ಎನ್.ಎಫ್ ತಂಡಗಳು ಕಾರ್ಯ ಪ್ರವೃತ್ತರಾಗಿದ್ದು ನಕ್ಸಲರು ಊಟ ಮಾಡಿ ಹೋಗುವಾಗ ಪೊಲೀಸ್ ಬರ್ತಾರೆಂದು ಗನ್ ಬಿಟ್ಟು ಹೋಗಿದ್ದ ಬಗ್ಗೆ ಕುತೂಹಲಕಾರಿ ಪ್ರಶ್ನೆ ಮುಂದಿಟ್ಟರು ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ದಶಕಗಳಿಂದ ಇಲ್ಲದ ನಕ್ಸಲರ ಆಗಮನದಿಂದ ಪೊಲೀಸ್, ಎ.ಎನ್.ಎಫ್. ಹೈ ಅಲರ್ಟ್ ಆಗಿದ್ದಾರೆ. ಚಿಕ್ಕಮಗಳೂರು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದ್ದು ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಅರಣ್ಯಗಳಲ್ಲಿ ಆಂಬುಸ್ ಆಪರೇಷನ್ ಗೆ ಇಳಿದಿದ್ದಾರೆ.
Leave a comment