ಚಿಕ್ಕಮಗಳೂರು: ತಾಲೂಕಿನ ಬೊಂಬೈಲು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಬೇರೊಂದು ಶಾಲೆಗೆ ವಿಲೀನಗೊಳಿಸದಿರಲು ಒತ್ತಾಯಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರತಿಭಟನೆ ನಡೆಸಿದರು.
ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಬೊಂಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚದೆ ಉಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸಂಘಟನಕಾರ ಅಭಿಷೇಕ್ ಮಾತನಾಡಿ ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಮಾಡುತ್ತೇವೆಂದು ಹೇಳಿ ೪೦ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿದೆ ಎಂದು ತಿಳಿಸಿದರು
ಬೊಂಬೈಲು ಶಾಲೆಯನ್ನು ಮುಚ್ಚಿದರೆ ಮಕ್ಕಳು ಮೈಲಿಮನೆ ಶಾಲೆಗೆ ಹೋಗಿ ಓದಬೇಕು.ಈ ಗ್ರಾಮದಲ್ಲಿ ಬಸ್ಸೌಲಭ್ಯವಿಲ್ಲ ಗ್ರಾಮದಿಂದ ಸಣ್ಣಮಕ್ಕಳು ನಡೆದುಕೊಂಡುಹೋಗಿ ವಿದ್ಯಾಭ್ಯಾಸ ಮಾಡಿ ಮತ್ತೆ ಮನೆಗೆ ಹಿಂದಿರುಗಲು ಸಾಧ್ಯವೇ ಎಂದು ಪ್ರಶ್ನಿಸಿ,ಸರ್ಕಾರ ವ್ಯವಸ್ಥಿತವಾಗಿ ಶಿಕ್ಷಣವನ್ನು ಬಡವರ, ಕೂಲಿ ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಕಸಿಯುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಸಚಿವರು ನಮ್ಮ ರಕ್ತದಲ್ಲಿ ಕನ್ನಡವಿದೆ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿ ಹಿಂದೆಯಿಂದ ಆದೇಶವನ್ನು ಹೊರಡಿಸಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರ ನಡೆಸಿವೆ. ಈ ಎಂಟು ವರ್ಷಗಳಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದಾರೆಂದು ಟೀಕಿಸಿದರು.
ಗ್ರಾಮದ ಹರೀಶ್ ಮಾತನಾಡಿ, ನಮ್ಮೂರಶಾಲೆ ಇತ್ತೀಚಿಗೆ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದೆ, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಇನ್ನು ಮುಂದೆಯೂ ಇದು ಇಲ್ಲಿಯೇ ಉಳಿಯಬೇಕು. ಹಾಗಾಗಿ ಯಾವುದೇ ಕಾರಣಕ್ಕೂ ನಾವು ಈ ಶಾಲೆಯನ್ನು ಮುಚ್ಚಲು ಬಿಡದೆ ಒಟ್ಟಾಗಿ ಹೋರಾಟ ಮಾಡೋಣ ಎಂದರು.
ಪ್ರತಿಭಟನೆಯಲ್ಲಿ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಗ್ರಾಮಸ್ಥರಾದ ಲಕ್ಷ್ಮಣ, ನೀಲ, ರತ್ನ, ಮಂಜುನಾಥ್, ಅಶೋಕ್, ರೇಣುಕಾ, ಪ್ರೇಮ, ಇಂದಿರಾ, ಧರ್ಮೇಂದ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
AIDSSO-led protest against school merger
Leave a comment