ಚಿಕ್ಕಮಗಳೂರು : ದತ್ತಪೀಠದಲ್ಲಿ ಕುಂಕುಮ ಹಾಕಿರುವ ಪ್ರಕರಣವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ದತ್ತ ಜಯಂತಿ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅಶಾಂತಿ ಮತ್ತು ಗೊಂದಲ ಸೃಷ್ಟಿಸಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಟಿ ರಂಗನಾಥ್ ಆರೋಪಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕೃತ ಮನಸ್ಥಿತಿಯ ಕೆಲವರು ಪದೇ ಪದೇ ಪತ್ರಿಕೆಗಳಲ್ಲಿ ಹೇಳಿಕೆ ನೀಡುವ ಮೂಲಕ ದತ್ತ ಪೀಠದಲ್ಲಿ ನಡೆಯುತ್ತಿರುವ ಪೂಜಾ ಕೈಂಕರ್ಯಗಳಿಗೆ ಅಡ್ಡಿಪಡಿಸುವ ಮತ್ತು ಅರ್ಚಕರಿಗೆ ಬೆದರಿಸುವ ಮೂಲಕ ವಾದಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಿಡಿಗೇಡಿಗಳ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಕಲ್ಪಿಸಲಾಗಿದ್ದು, ಹಿಂದೂ ಪೂಜಾ ಪದ್ದತಿಯಂತೆ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ ಆದರೆ ಜ್ಞಾನವಿಲ್ಲದ ವ್ಯಕ್ತಿಗಳು ಕೋಮು ಭಾವನೆ ಕೆರಳಿಸಲು ಯತ್ನಿಸುತ್ತಿದ್ದಾರೆ ಇದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಹಿಸುವುದಿಲ್ಲ. ಆಗಮ ಶಾಸ್ತ್ರದ ಪ್ರಕಾರ ಅರ್ಚಕರು ತ್ರಿಕಾಲ ಪೂಜೆ ಮಾಡುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಮಾಡಿರುವ ಆರೋಪ ಬರೀ ಸುಳ್ಳಿನ ಕಂತೆಯಾಗಿದ್ದು, ಇದು ವಕ್ಫ್ ಬೋರ್ಡ್ ಆಸ್ತಿಯಲ್ಲ, ಮುಜರಾಯಿ ಆಸ್ತಿಯಾಗಿದೆ. ಶಾಖಾದ್ರಿ ವಂಶಸ್ಥರು ಎಂದು ಹೇಳಿಕೊಂಡು ಕೆಲವರು ಪ್ರತಿಭಟನೆ ಜಿಲ್ಲಾ ಆಡಳಿತಕ್ಕೆ ಮನವಿ ಹಾಗೂ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ರಂಗನಾಥ್, ದತ್ತ ಜಯಂತಿ ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಹಿಂದೂ ಸಂಘಟನೆಗಳು ಇಚ್ಚಿಸಿದ್ದು ಯಾವುದೇ ಈ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.
Leave a comment