ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ ಜಾಗೃತಿ ಕೊಟ್ಟ ಪರಿಣಾಮ ಕನ್ನಡ ಭಾಷೆಗೆ ಹೊಸ ಆಯಾಮ ತಂದುಕೊಟ್ಟು ಚಿರಸ್ಥಾಯಿಯನ್ನಾಗಿಸಿದೆ ಎಂದು ನಟ, ನಿರ್ಮಾಪಕ, ನಿರ್ದೇಶಕ, ರಂಗಕರ್ಮಿ ಟಿ.ಎಸ್. ನಾಗಾಭರಣ ಅಭಿಪ್ರಾಯಿಸಿದರು.
ಅವರು ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಐಸಿರಿ ಫೌಂಡೇಶನ್ ಹಾಗೂ ಐಸಿರಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶಿವಾನುಭವಗೋಷ್ಠಿ-೪೯ ಐಸಿರಿ ಸ್ಟೀಲ್ ಬ್ಯಾಂಕ್ ಲೋಕಾರ್ಪಣೆ, ಐಸಿರಿ ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಐಸಿರಿ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಇಂದಿಗೂ ಸಹ ಕನ್ನಡ ಭಾಷೆ ವರ್ಚಸ್ಸನ್ನು ಹೊಂದಿರುವುದಕ್ಕೆ ವಚನಾಕಾರರು ಕೊಟ್ಟ ಸಾಹಿತ್ಯ ಪ್ರಮುಖ ಕಾರಣವಾಗಿದ್ದು, ಪ್ರಜಾ ಸಾಹಿತ್ಯ ಎಂದು ಕರೆಯಲ್ಪಡುವುದೇ ವಚನ ಸಾಹಿತ್ಯ. ಸಾದಾ ಸೀದವಾಗಿ ಕೇಳಿದ ತಕ್ಷಣವೇ ಪರಿವರ್ತನೆಗೊಳ್ಳುವ ವಚನ ಸಾಹಿತ್ಯ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದು ವಿಶ್ಲೇಷಿಸಿದರು.
ಕೇಂದ್ರ ಸರ್ಕಾರ ಎನ್‌ಇಪಿ ಮೂಲಕ ಇಡೀ ರಾಷ್ಟ್ರದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಮಾನ ಶಿಕ್ಷಣ ಜಾರಿಗೆ ತಂದರು. ಅದನ್ನು ವಿರೋಧಿಸಿ ಇಂದೂ ಸಹ ಶಿಕ್ಷಣವನ್ನು ಎಡಪಂಥೀಯರ ಕೈಯಲ್ಲಿ ಇರಿಸಲಾಗಿದೆ ಎಂದು ದೂರಿದರು. ಬಸವಣ್ಣ, ಸ್ವಾಮಿ ವಿವೇಕಾನಂದ, ಕನಕದಾಸರ ವಿಚಾರಧಾರೆಗಳ ಜೊತೆಗೆ ಮಹರಾಜರು ಗಾಂಭೀರ್ಯದ ಆಡಳಿತ ವ್ಯವಸ್ಥೆಯನ್ನು ನಡೆಸಿದರು. ಆದರೆ, ಸಂಸ್ಕೃತಿಯ ಮೇಲೆ ಆಕ್ರಮಣ ನಡೆಸಿದ ಪರಿಣಾಮ ಯುವ ಸಮೂಹ ಇದರಿಂದ ವಿಮುಖರಾಗಿ ನಮ್ಮ ಮನೆಯ ಆಚಾರ-ವಿಚಾರದಿಂದ ದೂರವಾಗಿ ಅವರದೇ ಆದ ನಮ್ಮದಲ್ಲದ ಸಂಸ್ಕೃತಿ ಬೆಂಬಲಿಸುತ್ತಿರುವುದನ್ನು ವಿರೋಧಿಸಿದರು.
ಐಸಿರಿ ಫೌಂಡೇಶನ್ ಮತ್ತು ಅದರ ಹಲವು ಮಜಲುಗಳ ಲೋಗೋವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ಎಸ್ ರಾಘವೇಂದ್ರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಐಸಿರಿ ಫೌಂಡೇಶನ್ ಕೊಡಮಾಡುವ ಸಾಧಕ ಪ್ರಶಸ್ತಿಯನ್ನು ಟಿ.ಎಸ್ ನಾಗಾಭರಣ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಸಮನ್ವಯ ಸಂಸ್ಥೆಯ ಸಮನ್ವಯ ಕಾಶಿ, ನೈಸರ್ಗಿಕ ಕೃಷಿಕ ಚಂದ್ರಶೇಖರ್ ನಾರಣಾಪುರ, ವೈಲ್ಡ್‌ಕ್ಯಾಟ್-ಸಿ ಸಂಸ್ಥಾಪಕ ಡಿ.ವಿ ಗಿರೀಶ್‌ರವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ ಎಲ್ಲಾ ದಿಕ್ಕಿನಿಂದ ಒಳ್ಳೆ ವಿಚಾರಗಳು ಬಂದು ಸೇರಿ ಮುಕ್ತ ಹೃದಯ ಬೆಳೆಸಬೇಕು. ಇದು ಎಡ ಮತ್ತು ಬಲ ಪಂಥೀಯ ಪುಸ್ತಕಗಳಿಂದ ದೊರೆಯುವುದಿಲ್ಲ. ಕಲಿಯುವಿಕೆಯನ್ನು ಕೇಂದ್ರವಾಗಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಹಂಬಲ ಮೂಡಿಸಬೇಕಾಗಿದೆ ಎಂದರು.
ಶಿಕ್ಷಣ ರಂಗವನ್ನು ನ್ಯಾಯಾಂಗ, ಲೋಕಾಯುಕ್ತ, ಚುನಾವಣಾ ರಂಗದ ರೀತಿಯಲ್ಲಿ ರಾಜಕೀಯ ಮುಕ್ತವಾಗಿರುವ ರಂಗವನ್ನು ರೂಪಿಸುವ ತುರ್ತು ಅಗತ್ಯ ಇದೆ ಎಂದು ಒತ್ತಾಯಿಸಿದರು. ಪಠ್ಯಪುಸ್ತಕದಲ್ಲಿ ಈ ಪಂಥಗಳಿಂದ ಬಿಡುಗಡೆಗೊಳಿಸಿ ನೀತಿ-ನಿರೂಪಣೆಗಳನ್ನು ಅಳವಡಿಸುವ ಕೆಲಸಗಳನ್ನು ಶಾಸನ ಸಭೆಗಳು ಮಾಡುವ ಮೂಲಕ ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್‌ಕಿಶೋರ್ ಕುಮಾರ್ ಹೆಗಡೆಹಿರೇಮಗಳೂರು ಕಣ್ಣನ್‌ಬಿ.ಸಿ ಬಸವರಾಜುಚಂದ್ರಶೇಖರ ನಾರಾಣಾಪುರ ಕಾರ್ಯಕ್ರಮದಲ್ಲಿ ಹೆಚ್.ಸಿ. ಕಲ್ಮರುಡಪ್ಪ, ಸೋಮಶೇಖರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಐಸಿರಿ ಪತ್ರಿಕೆ ಸಂಪಾದಕರಾದ ಕೆ.ಕೆ ಕಲ್ಯಾಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಐಸಿರಿ ಪತ್ರಿಕೆಯ ಪ್ರಧಾನ ಜಿಲ್ಲಾ ವರದಿಗಾರ ಸಿ.ಡಿ. ಚಂದ್ರೇಗೌಡ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.
A great contribution to Kannada in the 12th century through the medium of vocab
Leave a comment