ಚಿಕ್ಕಮಗಳೂರು: ಸಮಾನತೆಯ ಆಶಯ ದೊಂದಿಗೆ ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಮಲೆನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಶ್ರೇಷ್ಠ ಸಂದೇಶ ನೀಡಿದ ಶಿವಶರಣರ ಪೈಕಿ ಹಡಪದ ಅಪ್ಪಣ್ಣ ಅತ್ಯಂತ ಪ್ರಮುಖರು. ವಚನ ಸಾಹಿತ್ಯ ರಚನೆ ಹಾಗೂ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅಪಾರ ಹಾಗೂ ಮೇರುಮಟ್ಟದ್ದು. ಅವರ ಪತ್ನಿ ಕೂಡ ಅದ್ಭುತ ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.
12ನೇ ಶತಮಾನದಲ್ಲಿ ವರ್ಗ, ವರ್ಣ ಹಾಗೂ ಜಾತಿ ಸಂಘರ್ಷಗಳು ಆಧುನಿಕ ಯುಗದಲ್ಲೂ ಇನ್ನೂ ಹೆಚ್ಚಾಗುತ್ತಿರುವುದು ಶೋಚನೀಯ. ಇಂತಹ ತಾರತಮ್ಯ ಮತ್ತು ಜಾತಿ ವ್ಯವಸ್ಥೆಯನ್ನು ಸಮಾಜದಿಂದ ಕಿತ್ತೊಗೆಯಬೇಕಿದೆ. ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಕನಸು ಕಂಡಿದ್ದ ಶೋಷಣೆ ರಹಿತ, ಸಮಾನತೆಯ ಸಮಾಜ ಕಟ್ಟಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಆಪತ್ತಿನಲ್ಲಿ ದೇಶ ಕಾಯುವ ಸೈನಿಕರನ್ನು ಹಾಗೂ ಸಣ್ಣ ಉಪಕಾರ ಮಾಡಿದವರನ್ನು ಎಂದಿಗೂ ಮರೆಯಬಾರದು. ನೆನಪಿಸಿಕೊಳ್ಳುವ, ಗೌರವಿಸುವ ಹಾಗೂ ದೈವತ್ವಕ್ಕೆ ಏರಿಸುವ ಮಹಾನ್ ಸಂಸ್ಕೃತಿ ಭಾರತೀಯ ಮೂಲದ್ದು’ ಎಂದು ಹೇಳಿದರು.
12ನೇ ಶತಮಾನದಲ್ಲಿ ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸಿ ನೇಕಾರನಾದ ಹಾಗೂ ವೇದ ಓದಿ ಹಾರುವನಾದ ಎಂದು ವೃತ್ತಿಗಳ ಆಧಾರದ ಮೇಲೆ ಗುರುತಿಸಲಾಗುತ್ತಿತ್ತು. ವೃತ್ತಿಗಳಿಂದ ಜಾತಿಗಳು ನಿರ್ಮಾಣವಾದವೇ ಹೊರತು ಹುಟ್ಟಿನಿಂದ ಅಲ್ಲ. ಬಸವಣ್ಣ ಕೂಡ ತಮ್ಮ ವಚನಗಳಲ್ಲಿ ಇದನ್ನೇ ಸ್ಪಷ್ಟಪಡಿಸಿದ್ದಾರೆ. ಈ ಅಸಮಾನತೆಯನ್ನು ಹೋಗಲಾಡಿಸಲು ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಅವರಂತಹ ಶರಣರು ‘ಕಾಯಕವೇ ಕೈಲಾಸ’ ಮತ್ತು ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಮಹತ್ವದ ತತ್ವಗಳನ್ನು ನೀಡಿದರು ಎಂದು ಬಣ್ಣಿಸಿದರು.
ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಯಣ್ಣ ನಿಡಘಟ್ಟ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ರಮೇಶ್, ಪತ್ರಕರ್ತ ಎಂ.ಎಸ್.ಉಮೇಶ್‌ಕುಮಾರ್, ಸವಿತಾ ಸಮಾಜದ ಅಧ್ಯಕ್ಷ ಮಹಾಲಿಂಗಯ್ಯ, ಹಸೀನಾ ಬಾನು ಭಾಗವಹಿಸಿದ್ದರು.
The need of the hour is to fight together to build an equal society.
Leave a comment