ಚಿಕ್ಕಮಗಳೂರು: ಕಾಫಿನಾಡಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕವು ಸಾಹಿತ್ಯ ಸೇವೆಯ ಜೊತೆಗೆ ಅತ್ಯಂತ ಶ್ಲಾಘನೀಯ ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳುವ ಮೂಲಕ ಬಡ ಮಕ್ಕಳ ಬಾಳಿಗೆ ಬೆಳಕಾಗಿದೆ. ತಾಲ್ಲೂಕು ಕಸಾಪ ಘಟಕವು ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಸಹಯೋಗ ಹಾಗೂ ಸಹಕಾರದೊಂದಿಗೆ ಜಿಲ್ಲೆಯ 25 ಮಕ್ಕಳಿಗೆ ಉಚಿತವಾಗಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಕೊಡಿಸುವ ಮೂಲಕ ಮಹತ್ತರವಾದ ಮಾನವೀಯ ಕಾರ್ಯವನ್ನು ಮಾಡಿದೆ.
ಕಳೆದ ಮೇ 14 ರಂದು ಚಿಕ್ಕಮಗಳೂರು ತಾಲೂಕು ಕಸಾಪ ಘಟಕದ ವತಿಯಿಂದ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಖ್ಯಾತ ಮಕ್ಕಳ ಹೃದ್ರೋಗ ತಜ್ಞರಾದ ಡಾ. ಗೋವಿಂದರಾಜ್ ನೇತೃತ್ವದ ವೈದ್ಯರ ತಂಡವು ತಪಾಸಣೆ ನಡೆಸಿ, ಶಸ್ತ್ರ ಚಿಕಿತ್ಸೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸಿತ್ತು. ಈ ಶಿಬಿರದಲ್ಲಿ ಪತ್ತೆಯಾದ 9 ತಿಂಗಳಿಂದ ಹಿಡಿದು 14 ವರ್ಷದೊಳಗಿನ ಒಟ್ಟು 25 ಮಕ್ಕಳಿಗೆ ಈಗ ಸಂಪೂರ್ಣ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಗುತ್ತಿದೆ.
ಈ ಪುಣ್ಯ ಕಾರ್ಯಕ್ಕಾಗಿ ಚಿಕ್ಕಮಗಳೂರಿನಿಂದಲೇ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿ, ಮಕ್ಕಳು ಹಾಗೂ ಅವರ ಪೋಷಕರನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕೇವಲ ಶಸ್ತ್ರ ಚಿಕಿತ್ಸೆಯಷ್ಟೇ ಅಲ್ಲದೆ, ಆಸ್ಪತ್ರೆಯಲ್ಲಿ ದಾಖಲಾದ ಅವಧಿಯಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ಉಚಿತವಾಗಿ ಊಟ, ತಿಂಡಿ ಹಾಗೂ ವಸತಿ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿದೆ.
ಸಾಹಿತ್ಯಕ ಚಟುವಟಿಕೆಗಳಿಗೆ ಸೀಮಿತವಾಗದೆ, ಬಡ ಕುಟುಂಬಗಳ ಮಕ್ಕಳ ಆರೋಗ್ಯ ರಕ್ಷಣೆಗೆ ನಿಂತ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಈ ಅಪೂರ್ವ ಸೇವೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳು ಹರಿದು ಬರುತ್ತಿವೆ.
K.S.P unit that helped poor children’s lives
Leave a comment