ಮೂಡಿಗೆರೆ: ಹೇಮಾವತಿ ನದಿಯಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿಗಂಡಿ ಬಳಿ ನಡೆದಿದೆ.
ನದಿ ತೀರದಲ್ಲಿ ತುಂಡಾಗಿ ಬಿದ್ದಿದ್ದ ಸಜೀವ ವಿದ್ಯುತ್ ತಂತಿ ತಗುಲಿದ ಪರಿಣಾಮ ಸಂತೋಷ್ (೩೮) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೇಲೂರು ತಾಲೂಕಿನ ಚೀಕನಹಳ್ಳಿ ನಿವಾಸಿಯಾದ ಇವರು, ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ಆ ಕೆಲಸ ಬಿಟ್ಟಿದ್ದ ಸಂತೋಷ್ ಅವರು, ಪತ್ನಿಯ ಜೊತೆ ಸಂಬಂಧಿಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ವಿಧಿಯಾಟ ನಡೆದಿದೆ.
ನದಿಗೆ ಬಟ್ಟೆ ಒಗೆಯಲು ಪತ್ನಿ ಹಾಗೂ ಸಂಬಂಧಿಕರ ಜೊತೆ ಹೋಗಿದ್ದಾಗ, ನದಿ ತೀರದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದರಿಂದ ಈ ದುರಂತ ಸಂಭವಿಸಿದೆ. ಲೈನ್ ಮೆನ್ ಆಗಿ ವಿದ್ಯುತ್ ಗೆ ಸಂಬಂಧಿಸಿದ ಅಪಾಯಗಳನ್ನು ಅರಿತಿದ್ದ ವ್ಯಕ್ತಿಯೇ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಈ ಘಟನೆಯಿಂದ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು, ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಯೇ ಈ ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ. ನದಿ ತೀರದಂತಹ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೂ ಗಮನಿಸದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರಸ್ತುತ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Man dies after touching electric wire near Hemavati river
Leave a comment