ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಗೂ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಅಂಗಡಿ ವ್ಯಾಪಾರಿ ಸುರೇಶ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್‌ಐ ರೇಣುಕಾ ಡಿ.ವಿ. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮದ್ಯದ ಖಾಲಿ ಟೆಟ್ರಾ ಪ್ಯಾಕ್ ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿತಿಮ್ಮಾಪುರ ಗ್ರಾಮದ ಟವರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿದ್ದ ಹೇಮಗಿರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್‌ಐ ಶಶಿಕುಮಾರ್ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಈ ಅಕ್ರಮ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಮದ್ಯದ ಪೌಚ್‌ಗಳು ಹಾಗೂ ನೀರಿನ ಬಾಟಲಿಯನ್ನು ಜಪ್ತಿ ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ನಿಗಾ ವಹಿಸಿದ್ದಾರೆ.
Two arrested for selling illegal liquor
Leave a comment